ತೀರ್ಥಹಳ್ಳಿ,ತಾಲೂಕಿನ ಕುಳ್ಳುಂಡೆ ಗ್ರಾಮದಲ್ಲಿ ಮನೆಯೊಂದರ ಹಂಚು ತೆಗೆದು ಒಳ ನುಗ್ಗಿದ ಕಳ್ಳರು, ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕುಳ್ಳುಂಡೆ ಗ್ರಾಮದ ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆಯಲು ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಅವರ ಮನೆಗೆ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಕನ್ನ ಹಾಕಿದ್ದಾರೆ.
ಮನೆಯ ಹಂಚುಗಳು ತೆರೆದಿರುವುದನ್ನು ಗಮನಿಸಿದ ಪಕ್ಕದ ಮನೆಯವರು, ತಕ್ಷಣವೇ ಮಹಿಳೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಿಮ್ಮ ಮನೆಯ ಹಂಚನ್ನು ಯಾರೋ ತೆಗೆದಂತೆ ಕಾಣಿಸುತ್ತಿದೆ, ತಕ್ಷಣ ಮನೆಗೆ ಬನ್ನಿ ಎಂದು ನೆರೆಹೊರೆಯವರು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆತಂಕದಿಂದಲೇ ಮನೆಗೆ ಓಡಿ ಬಂದ ಮಹಿಳೆಗೆ ಶಾಕ್ ಕಾದಿತ್ತು. ಅದೇನೆಂದರೆ ಕಳ್ಳರು ಮನೆಯ ಹಂಚು ತೆಗೆದು ಒಳ ನುಗ್ಗಿ, ಬೀರುವಿನಲ್ಲಿದ್ದ ಚಿನ್ನದ ಉಂಗುರ ಹಾಗೂಗೋಲ್ಡ್ ಪೆಂಡೆಂಟ್ ಸೇರಿದಂತೆ ಒಟ್ಟು 59 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.


