ಶಿವಮೊಗ್ಗ | ಖಾಸಗಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ₹4 ಕೋಟಿ ಅವ್ಯವಹಾರ ಆರೋಪ?

ಕ್ರೈಂ

ಶಿವಮೊಗ್ಗ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೊಂದಾದ ಮ್ಯಾಕ್ಸ್ ಆಸ್ಪತ್ರೆ ನಲ್ಲಿ ಕೋಟ್ಯಾಂತರ ರೂಪಾಯಿ ಹಣಕಾಸು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಅಕೌಂಟ್ಸ್ ವಿಭಾಗದ ಒಬ್ಬ ಮಹಿಳೆ ಸೇರಿ ನಾಲ್ವರು ಸಿಬ್ಬಂದಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಮೂಲಗಳ ಪ್ರಕಾರ, ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಆಸ್ಪತ್ರೆಯ ಆಂತರಿಕ ಆಡಿಟ್ ವೇಳೆ ಸುಮಾರು ₹4 ಕೋಟಿ ರೂಪಾಯಿ ಮಟ್ಟದ ಹಗರಣ ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ.

ಆರೋಪಿತ ಸಿಬ್ಬಂದಿ ಆಸ್ಪತ್ರೆಯ ಲೆಕ್ಕಪತ್ರ ಹಾಗೂ ಡಿಜಿಟಲ್ ಡಾಟಾಗಳಲ್ಲಿ ತಿದ್ದುಪಡಿ ನಡೆಸಿ, ಕೆಲ ಪ್ರಮುಖ ದಾಖಲೆಗಳನ್ನು ಡಿಲೀಟ್ ಮಾಡುವ ಮೂಲಕ ಅವ್ಯವಹಾರವನ್ನು ಮುಚ್ಚಿಹಾಕಲು ಯತ್ನಿಸಿದ್ದರೆಂಬ ಆರೋಪ ಕೇಳಿಬಂದಿದೆ. ವಿಶೇಷವಾಗಿ ಅಕೌಂಟ್ಸ್ ಸಾಫ್ಟ್‌ವೇರ್‌ನಲ್ಲಿದ್ದ ಹಣಕಾಸು ದಾಖಲೆಗಳನ್ನು ಅಳಿಸಿ, ವ್ಯವಹಾರಗಳ ಹಾದಿಯನ್ನು ಮಸುಕುಗೊಳಿಸಲು ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

ಆಡಿಟ್ ಪ್ರಕ್ರಿಯೆ ವೇಳೆ ಕೆಲವು ಹಣಕಾಸು ಎಂಟ್ರಿಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಬಿಲ್ಲಿಂಗ್ ದಾಖಲೆಗಳಲ್ಲಿ ಅಸಮಾನತೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಆಳವಾದ ಪರಿಶೀಲನೆ ಆರಂಭಿಸಿತು.

ಈ ವೇಳೆ ಕೋಟ್ಯಂತರ ರೂಪಾಯಿ ವ್ಯತ್ಯಾಸ ಪತ್ತೆಯಾಗಿದ್ದು, ಆಡಳಿತ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ, ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಜೊತೆಗೆ ಸೈಬರ್ ತಜ್ಞರ ಸಹಾಯದಿಂದ ಡಿಲೀಟ್ ಮಾಡಲಾದ ಡಾಟಾ ಮರುಪಡೆಯುವ ಪ್ರಕ್ರಿಯೆಯೂ ಆರಂಭವಾಗಿರುವ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಸಾಧ್ಯತೆಯೂ ಇದ್ದು, ಅಧಿಕೃತ ದೂರು ದಾಖಲಾಗುತ್ತಿದ್ದಂತೆ ಹಗರಣದ ನಿಖರ ಪ್ರಮಾಣ ಹಾಗೂ ಇನ್ನಷ್ಟು ಮಂದಿಯ ಪಾತ್ರ ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ನಗರದ ಆರೋಗ್ಯ ವಲಯದಲ್ಲೇ ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು,

“ಪ್ರತಿಷ್ಠಿತ ಆಸ್ಪತ್ರೆಯೊಳಗೆ ಇಷ್ಟೊಂದು ದೊಡ್ಡ ಮಟ್ಟದ ಹಣಕಾಸು ಅವ್ಯವಹಾರ ನಡೆದಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ..?

Author