ಹೊಸನಗರ,ಕಾಡುಪ್ರಾಣಿ ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿ ಎರ್ಟಿಗಾ ಕಾರ್ ಮೂಲಕ 21 ಕೆ.ಜಿ. ಮಾಂಸ ಸಾಗಿಸುತ್ತಿದ್ದ ವೇಳೆಯಲ್ಲಿ ಮಡಿಕೇರಿಯ ಅರಣ್ಯ ಸಂಚಾರಿದಳದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್ ಅವರ ಮಾರ್ಗದರ್ಶನದಲ್ಲಿ ಸಾಗರದ ಅರಣ್ಯ ಸಂಚಾರಿದಳ ಪಿಎಸ್ಐ ಕೆ. ವಿನಾಯಕ ಹಾಗೂ ಸಿಬ್ಬಂದಿಗಳು ಶುಕ್ರವಾರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬರುವೆ ಮುಖ್ಯರಸ್ತೆಯಲ್ಲಿ ದಿಢೀರ್ ದಾಳಿ ನಡೆಸಿ ಕಾರು ಸಹಿತ ಮಾಂಸವನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನ್ವಯ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಬರುವೆ ಗ್ರಾಮ ವಾಸಿ ಗುರುರಾಜ ಬಿನ್ ನರಸಿಂಹ ನಾಯ್ಕ್ ಹಾಗೂ ಕರಡಿಗ ಗ್ರಾಮದ ಗಣೇಶ್ ಬಿನ್ ಗೋಪಾಲ್ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ವ್ಯಾಪಕ ಜಾಲ ಬೀಸಲಾಗಿದೆ.
ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಬಿ.ಸಿ.ಗಣೇಶ, ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ, ಹೆಚ್.ಬಿ. ದೊಡ್ಮನಿ ಪಾಲ್ಗೊಂಡಿದ್ದರು.





