ಭದ್ರಾವತಿ | ಹಳೇ ದ್ವೇಷ ಹಿನ್ನಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕ್ರೈಂ

ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಅನ್ವರ್ ಕಾಲೋನಿಯಲ್ಲಿ ಇಂದು ನಡೆದ ಭೀಕರ ದಾಳಿಯಲ್ಲಿ ಮುದ್ದೆ ಅಲಿಯಾಸ್ ವಿಶ್ವನಾಥ್ ಎಂ. (35) ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಮೂಲಗಳ ಪ್ರಕಾರ, ವಿಶ್ವನಾಥ್ ಮೇಲೆ ಸುಮಾರು 6 ರಿಂದ 7 ಮಂದಿಯ ತಂಡ ಏಕಾಏಕಿ ದಾಳಿ ನಡೆಸಿದ್ದು, ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ದಾಳಿಕೋರರು ವಿಶ್ವನಾಥ್ ಅವರನ್ನು ಬೆನ್ನಟ್ಟಿ ಹಿಡಿದು ತಲ್ವಾರ್ ಹಾಗೂ ಇತರೆ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ತೀವ್ರ ರಕ್ತಸ್ರಾವಗೊಂಡ ವಿಶ್ವನಾಥ್ ಅವರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರು ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವನಾಥ್ ಭದ್ರಾವತಿ ಪ್ರದೇಶದಲ್ಲಿ “ಇಸ್ಪೀಟ್ ಕಿಂಗ್” ಎಂದೇ ಪರಿಚಿತರಾಗಿದ್ದು, ಇಸ್ಪೀಟ್ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದ ವೈಷಮ್ಯವೇ ದಾಳಿಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ದಾಳಿಯ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಘಟನೆ ಕುರಿತು ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕ ಸಂಗಮೇಶ ಪುತ್ರ ಬಸವ ಅವರ ಆರೋಪ :

ಮುದ್ದೆ @ ವಿಶ್ವನಾಥ್ ಹಲ್ಲೆ ಪ್ರಕರಣ: ಜೆಡಿಎಸ್ ಕಾರ್ಯಕರ್ತರ ಕೈವಾಡವಿದೆ ..! ಶಾಸಕ ಸಂಗಮೇಶ ಪುತ್ರ ಬಸವ ಅವರು ಆರೋಪಿಸಿದ್ದಾರೆ.

ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮುದ್ದೆ ಅಲಿಯಾಸ್ ವಿಶ್ವನಾಥ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರ ಬಸವ ಅವರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಕಾರ್ಯಕರ್ತನ ಮೇಲೆ ನಡೆದಿರುವ ಈ ಹಲ್ಲೆ ಅತ್ಯಂತ ಖಂಡನೀಯ. ಈ ಕೃತ್ಯದ ಹಿಂದೆ ಜೆಡಿಎಸ್ ಪಕ್ಷದ ಕೆಲವು ಕಾರ್ಯಕರ್ತರ ಕೈವಾಡವಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ. ತಪ್ಪಿತಸ್ಥರನ್ನು ಪೊಲೀಸರು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಶ್ವನಾಥ್ ಸದ್ಯ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಭದ್ರಾವತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಹಲ್ಲೆಯ ಹಿಂದಿನ ನಿಖರ ಕಾರಣ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Author