ರಾಜ್ಯಸಭಾ ಚುನಾವಣೆ : ಎನ್‌ಡಿಎ ಅಭ್ಯರ್ಥಿಯಾಗಿ ಮರುನಾಮನಿರ್ದೇಶನವಾಗುತ್ತಾರೆಯೇ ಎಚ್.ಡಿ ದೇವೇಗೌಡರು?

ರಾಜಕೀಯ

ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ, ಮಾಜಿ ಪ್ರಧಾನಮಂತ್ರಿ ಹಚ್.ಡಿ.ದೇವೇಗೌಡ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಮರುನಾಮನಿರ್ದೇಶನವಾಗುತ್ತಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಮುಖ ಸಭೆಯಲ್ಲಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಪಕ್ಷದ ಹಿರಿಯ ಪದಾಧಿಕಾರಿ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ದೇವೇಗೌಡರ ಮರುನಾಮಕರಣದ ಕುರಿತು ಪ್ರತಿಕ್ರಿಯಿಸಿದ ಅಗರ್ವಾಲ್, ಜೆಡಿಎಸ್ ವರಿಷ್ಠರ ಅಭ್ಯರ್ಥಿ ಕುರಿತ ಅಂತಿಮ ತೀರ್ಮಾನವನ್ನು ಪಕ್ಷದ ಕೇಂದ್ರ ಹೈಕಮಾಂಡ್ ತೆಗೆದುಕೊಳ್ಳುವುದರಿಂದ ಬಿಜೆಪಿ ಸದ್ಯಕ್ಕೆ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಭವಿಷ್ಯಕ್ಕೆ ದೇವೇಗೌಡರ ಸ್ಪರ್ಧೆ ನಿರ್ಣಾಯಕ

ಹಿಂದಿನ ಚುನಾವಣೆಯಲ್ಲಿ ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದರು. ಆದರೆ, 2024ರ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ರಾಜಕೀಯ ಸಮೀಕರಣಗಳು ಸಂಪೂರ್ಣ ಬದಲಾಗಿವೆ.

ರಾಜಕೀಯ ವಿಶ್ಲೇಷಕರ ಪ್ರಕಾರ, 93 ವರ್ಷದ ದೇವೇಗೌಡರು ಮತ್ತೊಮ್ಮೆ ಕಣಕ್ಕಿಳಿದರೆ ಅದು ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಡಿಯ ಐದು ಮಹಾನಗರ ಪಾಲಿಕೆಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ 2028 ರ ವಿಧಾನಸಭಾ ಚುನಾವಣೆಗಳವರೆಗೆ ಉಭಯ ಪಕ್ಷಗಳ ಮೈತ್ರಿ ಗಟ್ಟಿಯಾಗಿ ಮುಂದುವರಿಯಲು ದಿಕ್ಸೂಚಿಯಾಗಲಿದೆ ಎಂದು ತಿಳಿಸಿದ್ದಾರೆ.

ಹಳೆ ಮೈಸೂರು ಒಕ್ಕಲಿಗ ಸಮುದಾಯದ ಮೇಲೆ ದೇವೇಗೌಡರು ಹೊಂದಿರುವ ಬಲವಾದ ಪ್ರಭಾವವು ಮೈತ್ರಿಕೂಟದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

Author