ಭದ್ರಾವತಿ | ವಾಮಾಚಾರ ಮಾಡಲಾಗಿದೆ ಎಂದು ಮಹಿಳೆಯನ್ನು ನಂಬಿಸಿ ವಂಚನೆ

ಕ್ರೈಂ

ಭದ್ರಾವತಿ,ವಾಮಾಚಾರ ಮಾಡಲಾಗಿದೆ ಎಂದು ಮಹಿಳೆಯನ್ನು ನಂಬಿಸಿ, ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿದ ಆರೋಪಿಯನ್ನು ಹೊಸಮನೆ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಭದ್ರಾವತಿ ಗಾಂಧಿನಗರದ ನಿವಾಸಿ ಹಾಗೂ ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕಿಯಾಗಿರುವ 36 ವರ್ಷದ ಮಂಗಳ ನಾಯಕ್ ಅವರು ಸೆಪ್ಟೆಂಬರ್ 7ರಂದು ಪೊಲೀಸರಿಗೆ ದೂರು ನೀಡಿದ್ದರು.ದೂರಿನ ಪ್ರಕಾರ, ಮುರಳಿ ಮತ್ತು ಆತನ ಸಹೋದರ ರವಿ ಎಂಬವರು ಮಂಗಳ ನಾಯಕ್ ಅವರಿಗೆ ಪರಿಚಯವಾಗಿದ್ದರು. ಬಳಿಕ, ನಿಮ್ಮ ಮೇಲೆ ವಾಮಾಚಾರ ಪ್ರಯೋಗವಾಗಿದ್ದು, ಅದನ್ನು ತೆಗೆಸದೇ ಹೋದರೆ ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ದೊಡ್ಡ ಮಟ್ಟದ ಸಮಸ್ಯೆಯಾಗಲಿದೆ ಎಂದು ನಂಬಿಸಿದ್ದಾರೆ ಎನ್ನಲಾಗಿದೆ.

ನಂತರ ಮನೆಗೆ ಬಂದು ಪೂಜೆ ನಡೆಸಿದf ಆರೋಪಿಗಳು, ಪೂಜೆ ಪೂರ್ಣಗೊಂಡ ಬಳಿಕ ಬಂಗಾರದ ಒಡವೆಗಳನ್ನು ತಮ್ಮ ಬಳಿ ನೀಡುವಂತೆ ತಿಳಿಸಿದ್ದಾರೆ. ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ಹೇಳಿ ಮಹಿಳೆಯನ್ನು ನಂಬಿಸಿ, ಸುಮಾರು 193 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.155/2026, ಬಿಎನ್‌ಎಸ್ ಕಲಂ 316(2), 318(4) ಸಹಿತ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾಗಿದ ಕೆಲವೇ ಗಂಟೆಗಳಲ್ಲಿ ಮುರುಳಿ ಅಲಿಯಾಸ್ ಕರಿಯಾ, 31 ವರ್ಷ, ತಿಪ್ಲಾಪುರ ಕ್ಯಾಂಪ್, ಭದ್ರಾವತಿ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Author