ಕುಮಟಾ, ಡಿಜಿಟಲ್ ಪಾವತಿಯ ಹೆಸರಿನಲ್ಲಿ ವಂಚನೆ ನಡೆಸುವ ಪ್ರಕರಣವೊಂದು ಕುಮಟಾದಲ್ಲಿ ವರದಿಯಾಗಿದೆ. ಗ್ರಾಹಕನಂತೆ ಮೊಬೈಲ್ ಅಂಗಡಿಗೆ ಬಂದ ವ್ಯಕ್ತಿಯೊಬ್ಬರು, ಹಣ ಪಾವತಿಸಿರುವುದಾಗಿ ನಕಲಿ PhonePe ಸಂದೇಶ ತೋರಿಸಿ ₹16,700 ಮೌಲ್ಯದ ಮೊಬೈಲ್ ಫೋನ್ ಪಡೆದುಕೊಂಡು ಪರಾರಿಯಾಗಿದ್ದಾರೆ.ಕುಮಟಾ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ‘ಮಾತೋಶ್ರೀ ಏಜೆನ್ಸೀಸ್’ ಮೊಬೈಲ್ ಶೋರೂಮ್‌ನಲ್ಲಿ ಸೆಪ್ಟೆಂಬರ್ 10ರಂದು ಮಧ್ಯಾಹ್ನ ಸುಮಾರು 2.50ರ ವೇಳೆಗೆ ಈ ಘಟನೆ ನಡೆದಿದೆ.
ಅಪರಿಚಿತ ವ್ಯಕ್ತಿಯೊಬ್ಬರು ಅಂಗಡಿಗೆ ಬಂದು ₹16,700 ಬೆಲೆಯ Realme C-100 X ಮೊಬೈಲ್ ಫೋನ್ ಖರೀದಿಸಿದ್ದಾರೆ. ಬಳಿಕ ಹಣ ಪಾವತಿಸುವ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ QR ಕೋಡ್ ಸ್ಕ್ಯಾನ್ ಮಾಡಿದಂತೆ ನಟಿಸಿದ್ದಾರೆ. ನಂತರ ₹16,700 ಪಾವತಿ ಯಶಸ್ವಿಯಾಗಿದೆ ಎಂಬುದನ್ನು ತೋರಿಸುವ ನಕಲಿ ಸ್ಕ್ರೀನ್‌ಶಾಟ್ ಅನ್ನು ಅಂಗಡಿ ಮಾಲೀಕರಿಗೆ ಪ್ರದರ್ಶಿಸಿದ್ದಾರೆ.
ಹಣ ಖಾತೆಗೆ ಜಮೆಯಾಗಿರುವುದನ್ನು ಪರಿಶೀಲಿಸುವ ಮುನ್ನವೇ ಆರೋಪಿ ಮೊಬೈಲ್ ಫೋನ್ ಪಡೆದುಕೊಂಡು ಅಂಗಡಿಯಿಂದ ಹೊರಟು ಹೋಗಿದ್ದಾನೆ. ಬಳಿಕ ಬ್ಯಾಂಕ್ ಖಾತೆಯಲ್ಲಿ ಹಣ ಜಮೆಯಾಗಿಲ್ಲ ಎಂಬುದು ತಿಳಿದುಬಂದಿದ್ದು, ತಾನು ವಂಚನೆಗೆ ಒಳಗಾಗಿರುವುದಾಗಿ ಅಂಗಡಿ ಮಾಲೀಕ ಧನಂಜಯ ಮಂಜುನಾಥ ನಾಯ್ಕ ಅವರು ಅರಿತುಕೊಂಡಿದ್ದಾರೆ.
ಈ ಸಂಬಂಧ ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 319(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಠಾಣಾ ಅಪರಾಧ ಕ್ರಮಾಂಕ 188/2026 ಎಂದು ದಾಖಲಿಸಲಾಗಿದೆ.
ವಂಚಕನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ CCTV ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.





