ಶಿವಮೊಗ್ಗ, ರಾಮೇನಕೊಪ್ಪದಲ್ಲಿ ನಿನ್ನೆ ನಡೆದಿದ್ದ ಕುಳ್ಳಿ ಕಿರಣ್ (32) ಕೊಲೆ ಪ್ರಕರಣಕ್ಕೆ ಇಂದು ಬೆಳಗ್ಗೆ ಬೆಳಗ್ಗೆ ತಿರುವು ಸಿಕ್ಕಿದೆ. ಪ್ರಕರಣದ ಆರೋಪಿ ಲಿಂಗಾಪುರ ತಾಂಡಾದ ಉಮೇಶ್ ನಾಯ್ಕ್ (27) ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಪೊಲೀಸ್ ಗುಂಡೇಟಿಗೆ ಒಳಗಾದ ಉಮೇಶ್ ನಾಯ್ಕ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.ನಿನ್ನೆ ರಾಮೇನಕೊಪ್ಪ ಪ್ರದೇಶದಲ್ಲಿ ಕುಳ್ಳಿ ಕಿರಣ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇಸ್ಪೀಟ್ ಆಡುತ್ತಿದ್ದ ಸ್ಥಳದಲ್ಲಿಯೇ ಆತನ ಮೇಲೆ ದಾಳಿ ನಡೆದಿದ್ದು, ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿತ್ತು.
ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದರು.ಪ್ರಕರಣದ ಕುರಿತು ನಿನ್ನೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ರಾಮೇನಕೊಪ್ಪ ಪ್ರದೇಶದಲ್ಲಿ 32 ವರ್ಷದ ಕುಳ್ಳಿ ಕಿರಣ್ ಎಂಬಾತನ ಕೊಲೆ ನಡೆದಿರುವುದನ್ನು ದೃಢಪಡಿಸಿದ್ದರು.
ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು.
ಈ ಕೊಲೆಯಲ್ಲಿ ಸುಮಾರು 2ರಿಂದ 3 ಮಂದಿ ಭಾಗಿಯಾಗಿರುವ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ ಎಂದೂ ಎಸ್‌ಪಿ ನಿಖಿಲ್ ಬಿ. ಅವರು ನಿನ್ನೆ ನೀಡಿದ ಮಾಧ್ಯಮ ಬೈಟ್‌ನಲ್ಲಿ ಮಾಹಿತಿ ನೀಡಿದ್ದರು. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದುಬರಬೇಕಿದೆ ಎಂದಿದ್ದರು.





