ಶಿಕಾರಿಪುರ,ಅರಣ್ಯ ಇಲಾಖೆಯಲ್ಲಿ ಪ್ಲಾಂಟೇಶನ್ ವಾಚರ್ ಆಗಿ ಸೇವೆ ಸಲ್ಲಿಸುತ್ತಿರುವ ಕೆ.ಎನ್. ರಾಮು ಶಿಡಿಗಿನಾಳು ವಾಸಿ ಇವರು ಇತ್ತೀಚೆಗೆ ಕರ್ತವ್ಯ ನಿರತರಾಗಿದ್ದಾಗ ಕರಡಿ ಆಕಸ್ಮಿಕವಾಗಿ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ, ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಫಯಾಜುದ್ದೀನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯ್ಕ್ ವಿ.ಎಸ್ ಹಾಗೂ ವಲಯ ಅರಣ್ಯಾಧಿಕಾರಿ ಪರಶುರಾಮ ಎಲ್ ಆಸ್ಪತ್ರೆಗೆ ಭೇಟಿ ನೀಡಿದರು. ಗಾಯಾಳು ವಾಚರ್ ರಾಮು ಅವರ ಯೋಗಕ್ಷೇಮ ವಿಚಾರಿಸಿದ ಅಧಿಕಾರಿಗಳು, ಅವರಿಗೆ ಧೈರ್ಯ ತುಂಬಿದರು.ಬಳಿಕ ವೈದ್ಯಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಸೂಕ್ತ ಹಾಗೂ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
ಸಿಬ್ಬಂದಿಯ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಆರ್ಥಿಕ ಸಹಾಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಇಲಾಖೆಯ ಉನ್ನತಾಧಿಕಾರಿಗಳ ಈ ತಕ್ಷಣದ ಸ್ಪಂದನೆ ಮತ್ತು ನೆರವಿಗೆ ಗಾಯಾಳುವಿನ ಕುಟುಂಬಸ್ಥರು ಹಾಗೂ ಅರಣ್ಯ ಸಿಬ್ಬಂದಿ ವರ್ಗದವರು ಕೃತಜ್ಞತೆ ಸಲ್ಲಿಸಿದ್ದಾರೆ.





