ಜೀವಾವಧಿ ಶಿಕ್ಷೆಗೊಳಗಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಬಿಗ್ ರಿಲೀಫ್

ಕ್ರೈಂ

ಬೆಂಗಳೂರು,ಧಾರವಾಡದ ಬಿಜೆಪಿ‌ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಟ್ಟಿದೆ.

5 ಲಕ್ಷ ರೂ ಬಾಂಡ್ ಹಾಗೂ ಶ್ಯೂರಿಟಿ ಒದಗಿಸಬೇಕು, ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ನೀಡಿದೆ.ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.ವಿನಯ್ ಕುಲಕರ್ಣಿ ‘ದೋಷಿ’ ಎಂದಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿರುವ ಕಾರಣ ಅವರ ಶಾಸಕ ಸ್ಥಾನಕ್ಕೆ ಮರುಜೀವ ಬಂದಂತಾಗಿದೆ.

ಪ್ರಕರಣದ ಹಿನ್ನೆಲೆ 2016ರ ಜೂನ್ 15 ರಂದು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಮ್ನಲ್ಲಿ ಯೋಗೀಶ್ ಗೌಡ ಕೊಲೆ ನಡೆದಿತ್ತು. ಬೆಳಗ್ಗೆ ಜಿಮ್ನಲ್ಲಿ ನ್ಯೂಸ್ ಪೇಪರ್ ಓದುತ್ತಿರುವಾಗಲೇ ನಡೆದಿತ್ತು. ಆರಂಭದಲ್ಲಿ ಧಾರವಾಡ ಉಪನಗರ ಪೊಲೀಸರೇ ತನಿಖೆ ನಡೆಸಿದ್ದರು. ಬಳಿಕ ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು.

Author