ಶಿವಮೊಗ್ಗ | ಅಕ್ರಮ ಮರಳು ಗಣಿಗಾರಿಕೆ ; ಲೋಕಾಯುಕ್ತದಿಂದ ಪತ್ರಕರ್ತರಿಗೂ ನೋಟೀಸ್..?

ಶಿವಮೊಗ್ಗ

ಶಿವಮೊಗ್ಗ,ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ‘ತುಷಾರ’ (ತುಂಗಭದ್ರಾ, ಶರಾವತಿ ನದಿಗಳ ರಕ್ಷಣೆ) ಹೆಸರಲ್ಲಿ ನಿನ್ನೆ ದಿವಸ ನಡೆಸಿದ ಈ ರಹಸ್ಯ ಕಾರ್ಯಾಚರಣೆಯ ಪ್ರತೀ ಹಂತವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಖುದ್ದಾಗಿ ನಿರ್ವಹಣೆ ಮಾಡಿದ್ದಾರೆ ಎಂಬ ಮಾಹಿತಿಯಾಗಿದೆ.

ಅವರ ಸೂಚನೆಯ ಮೇರೆಗೆ ನಿನ್ನೆ ದಿವಸ ದೊಡ್ಡಮಟ್ಟದಲ್ಲಿ ಅಕ್ರಮ ಮರಳು ಕ್ವಾರಿಗಳ ಮೇಲೆ ದಾಳಿ ಸಂಘಟಿಸಲು ಕಳೆದ ಎರಡು ತಿಂಗಳಿಂದ ಸ್ಥಳೀಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಗೂಗಲ್ ನಕ್ಷೆ ಹಾಗೂ ಚಿತ್ರಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿತ್ತು. ಶಿವಮೊಗ್ಗ ಮಾತ್ರವಲ್ಲದೇ ದೂರದ ಬೆಳಗಾವಿ, ಪಕ್ಕದ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಹಾಡೋನಹಳ್ಳಿ, ಭದ್ರಾವತಿ ತಾಲ್ಲೂಕಿನ ಮಂಗೋಟೆ, ಸನ್ಯಾಸಿಕೋಡಮಗ್ಗಿ, ನಿಂಬೆಗೊಂದಿ, ನಾಗಸಮುದ್ರ, ಡಣಾಯಕಪುರ, ಕೂಡ್ಲಿಯ ಭದ್ರಾ ಹಾಗೂ ತುಂಗಾ ನದಿ ದಂಡೆ, ಭದ್ರಾಪುರ, ತೀರ್ಥಹಳ್ಳಿ ತಾಲ್ಲೂಕಿನ ದಬ್ಬಣಗದ್ದೆ, ಮಹಿಷಿ, ತೂದೂರು, ಹೊಸಹಳ್ಳಿ, ಆಚೆಪೇಟೆ, ಕೆದಲಗುಡ್ಡೆ, ಸುತ್ತಾ, ಕಲ್ಲುಹಳ್ಳ, ಹರಿದ್ರಾವತಿ, ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ, ಗೀಜಗ, ಬಿಲ್ಲುಸಾಗರ, ಎಡಚಿಟ್ಟಿ, ಮಂಣಸೆಟ್ಟೆ, ಮುಡುಗೊಪ್ಪದ ತುಂಗಾ-ಭದ್ರಾ ಹಾಗೂ ಶರಾವತಿ ನದಿಗಳಲ್ಲಿನ ಅಕ್ರಮ ಕ್ವಾರಿಗಳ ಮೇಲೆ 15 ತಂಡಗಳಾಗಿ ದಾಳಿ ನಡೆಸಲಾಗಿದೆ.

ಕ್ವಾರಿಗಳ ಎಲ್ಲ ಮಾಹಿತಿ ಮೊದಲೇ ಹೊಂದಿದ್ದ ಎಸ್ಪಿ ಎಂ.ಎಸ್.ಕೌಲಾಪುರೆ ಹಾಗೂ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಕಾರ್ಯಾಚರಣೆ ವೇಳೆ ತಂಡಗಳ ನಡುವೆ ಸಮನ್ವಯ ಸಾಧಿಸಿದ್ದರು.

ಪತ್ರಕರ್ತರಿಗೂ ನೋಟೀಸ್ :

ಅಕ್ರಮ ಮರಳುಗಣಿಗಾರಿಕೆಯಲ್ಲಿ ತೊಡಗಿರುವವರೊಂದಿಗೆ ಸಂಪರ್ಕ ಹಾಗೂ ಪಾಲುದಾರಿಕೆ ಹೊಂದಿರುವ ಮಾಹಿತಿ, ಸಾಕ್ಷ್ಯ ಲಭ್ಯದ ಹಿನ್ನೆಲೆಯಲ್ಲಿ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು, ತೀರ್ಥಹಳ್ಳಿಯ ತಲಾ ಒಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಪತ್ರಕರ್ತರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮರಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರ ವಿರುದ್ಧ ಕಠಿಣ ಕಾಯ್ದೆ, ನಿಯಮಾವಳಿ ಅನ್ವಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಂಎಂಆರ್‌ಡಿ (ಮೈನ್ಸ್ ಅಂಡ್ ಮಿನರಲ್ಸ್), ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ)ದ ಆದೇಶದ ಅನ್ವಯ ರೂಪುಗೊಂಡ ಪರಿಸರ ಸಂರಕ್ಷಣಾ ಕಾಯ್ದೆ, ಕರ್ನಾಟಕ ಮೈನ್ಸ್ ಅಂಡ್ ಮಿನರಲ್ಸ್ ರೂಲ್ಸ್, ಜೆಸಿಬಿ, ಹಿಟ್ಯಾಚಿ, ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿರುವುದಕ್ಕೆ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿದ ಪಿಡಿಪಿಪಿ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಹಾಗೂ ನದಿ ನೀರು ರಕ್ಷಣೆ ಕುರಿತಾದ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಿ ಮರಳುಗಳ್ಳರ ವಿರುದ್ಧ ಕಾನೂನಿನ ಕುಣಿಕೆ ಬಿಗಿ ಮಾಡಿದ್ದಾರೆ ಎಂಬ ಮಾಹಿತಿಯಾಗಿದೆ.

Author