ಶಿವಮೊಗ್ಗ,ಕರ್ನಾಟಕ ಲೋಕಾಯುಕ್ತ ಬೆಂಗಳೂರುರವರು “ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಹರಿಯುವ ತುಂಗಭದ್ರಾ ಮತ್ತು ಶರಾವತಿ ನದಿ ಪಾತ್ರದ ಸ್ಥಳಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಸಂಬಂಧ ಸ್ಥಳ ಪರಿಶೀಲನೆ ಕೈಗೊಳ್ಳುವಂತೆ ಹಾಗೂ ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಛೇರಿ ಶಿವಮೊಗ್ಗ ದಾಖಲಾತಿಗಳ ಪರಿಶೀಲನೆ ಮಾಡುವಂತೆ” ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ಆದೇಶಿಸಿರುವ ಮೇರೆಗೆ,
ಎಂ.ಎಸ್ ಕೌಲಾಪುರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಮತ್ತು ಬಿ.ಪಿ.ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗರವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ, ದಿನಾಂಕ: 30-05-2026 ರಂದು ಕರ್ನಾಟಕ ಲೋಕಾಯುಕ್ತ,
ಶಿವಮೊಗ್ಗ ಹಾಗೂ ಕರ್ನಾಟಕ ಲೋಕಾಯುಕ್ತದ ವಿವಿಧ ಘಟಕಗಳಿಂದ 15 ತಂಡಗಳು 25 ಸ್ಥಳಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಸ್ಥಳಗಳಲ್ಲಿ ದಾಳಿ ನಡೆಸಿ 17,000 ಮೆಟ್ರಿಕ್ ಟನ್ ಅಕ್ರಮ ಮರಳು ಸಂಗ್ರಹಣೆ ಮತ್ತು ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಸಂಬಂಧ ಉಪಯೋಗಿಸಿದ ಜೆ.ಸಿ.ಬಿ/ಹಿಟಾಚಿ, ಟಿಪ್ಪರ್ ಲಾರಿ, ಟ್ರ್ಯಾಕ್ಟರ್, ಬೋಟ್‌ಗಳು ಮತ್ತು ಮರಳು ಫಿಲ್ಟರ್ ಮಷೀನ್ ಒಳಗೊಂಡಂತೆ 52 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್.ಟಿ.ಓ, ಅರಣ್ಯ ಇಲಾಖೆ, ಸಹಾಯಕ ಭೂ ದಾಖಲಾತಿ ಇಲಾಖೆ, ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಇಲಾಖೆ ಮತ್ತು ಪಿ.ಡಬ್ಲ್ಯೂಡಿ ಇಲಾಖೆಯವರಿಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಶಿವಮೊಗ್ಗ ಕಛೇರಿಗೆ ಶೋಧನಾ ವಾರೆಂಟ್‌ನಂತೆ ಶೋಧನೆ ಕೈಗೊಂಡು ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಸದರಿ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಘಟಕಗಳಾದ ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿಕ್ಕಗಳುರು, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ವರ್ಗದವರು ರವರು ಹಾಜರಿರುತ್ತಾರೆ ಎಂದು ಈ ಮೂಲಕ ತಿಳಿಸಿದ್ದಾರೆ.

