ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಜಿಲ್ಲೆಯ ಅಕ್ರಮ ಮರಳು ಅಡ್ಡೆಗಳ ಮೇಲೆ ಅತಿ ದೊಡ್ಡ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ. ಜಿಲ್ಲೆಯ ಶಿವಮೊಗ್ಗ ಭದ್ರಾವತಿ ತೀರ್ಥಹಳ್ಳಿ ಹೊಸನಗರ ಸಾಗರ ತಾಲೂಕುಗಳ ವ್ಯಾಪ್ತಿಯ 25ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡಗಳ ಮೇಲೆ ಶಿವಮೊಗ್ಗ ಲೋಕಾಯುಕ್ತ ಡಿ ವೈ ಎಸ್ ಪಿ ಚಂದ್ರಶೇಖರ್ ನೇತೃತ್ವದಲ್ಲಿ ಹೆಚ್ಚು ಲೋಕ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆ ಪತ್ತೆ ಹಚ್ಚಿದ್ದಾರೆ.
ಅಕ್ರಮ ಮರಳುಗಾರಿಕೆ ಸಂಬಂಧ ಶಿವಮೊಗ್ಗ ಭದ್ರಾವತಿ ತೀರ್ಥಹಳ್ಳಿ ಸಾಗರ ತುಂಗಾ, ಭದ್ರಾ , ಶರಾವತಿ, ನದಿ ತೀರ ಹಲವಾರು ಕಡೆ ಲೋಕಾಯುಕ್ತ ಅಧಿಕಾರಿಗಳು ಬೇರೆ ಬೇರೆ ಹಾವೇರಿ ಇನ್ನಿತರೆ ಜಿಲ್ಲೆಯ ಅಧಿಕಾರಿಗಳು ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಹಾಗೂ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪಿ ಕೆ ನಾಯ್ಕ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ . ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಅವರು ಅಕ್ರಮ ಮರಳು ಮಾಫಿಯಾದ ವಿರುದ್ಧ ಸರ್ಚ್ ವಾರೆಂಟ್ ಜಾರಿ ಮಾಡಿದ್ದಾರೆ.
ಈ ನೆಲೆಯಲ್ಲಿ ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡ ಮಗ್ಗಿ ನಿಂಬೆಗೊಂದಿ ಮಂಗೋಟೆ ಮೊದಲಾದ ಕಡೆ ಶಿವಮೊಗ್ಗ ತಾಲೂಕಿನ ಕೂಡಲಿ ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ ತೂದೂರು ದಬ್ಬಣಗದ್ದೆ ಮೊದಲಾದ ಕಡೆ ಹೊಸನಗರ ತಾಲೂಕಿನ ಸುತ್ತಾ ,ಹರಿದ್ರಾವತಿ, ಸಂಪೆಕಟ್ಟೆ ಮೊದಲಾದ ಕಡೆ, ಸಾಗರ ತಾಲೂಕಿನ ಆವಿನ ಹಳ್ಳಿ ಮೊದಲಾದ ಕಡೆ ಅಕ್ರಮ ಮರಳು ಸಂಗ್ರಹ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಜೆಸಿಬಿ ಟ್ಯಾಕ್ಟರ್ ಲಾರಿ ಸೇರಿದಂತೆ 50 ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ನೂರಾರು ಮೆಟ್ರಿಕ್ ಟನ್ ಮರಳು ಸಂಗ್ರಹ ಜಪ್ತಿ ಮಾಡಲಾಗಿದೆ. ಗಣಿ ವಿಜ್ಞಾನಿ ಪಿಕೆ ನಾಯ್ಕ್ ಅವರು ಇತ್ತೀಚಿಗೆ ಒಂದುವರೆ ಕೋಟಿ ದಂಡ ವಿಧಿಸಿದ್ದರು ಯಾವುದೇ ರೀತಿ ಹಣ ಕಟ್ಟಿಸಿಕೊಳ್ಳಲಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರ ಕಚೇರಿಯಲ್ಲಿ ಪರಿಶೀಲನೆ ಮುಂದುವರೆದಿದೆ. ಬೆಳಗ್ಗೆಯಿಂದಲೇ ಆರಂಭಿಸಿರುವ ದಾಳಿ ಸಂಜೆವರೆಗೂ ಮುಂದುವರೆಯುವ ಸಾಧ್ಯತೆ ಇದೆ ಎಂಬ ಮಾಹಿತಿಯಾಗಿದೆ.

