ಬೆಂಗಳೂರು, RCB ತಂಡವು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಅಗ್ರ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದು, ನಾಲ್ಕರಲ್ಲಿ ಸೋಲುಂಡಿದೆ. ಇದರೊಂದಿಗೆ ಆರ್‌ಸಿಬಿ 16 ಅಂಕಗಳನ್ನು ಮತ್ತು +1.053 ನಿವ್ವಳ ರನ್ ಹೊಂದಿದೆ.
ಪ್ರಸ್ತುತ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಆರ್‌ಸಿಬಿ ತಂಡ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಈ ಎರಡು ಪಂದ್ಯಗಳನ್ನು ಗೆದ್ದರೆ, ಯಾವುದೇ ಅಡೆತಡೆ ಇಲ್ಲದೇ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ ಮತ್ತು ಟಾಪ್ -2 ರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿರುತ್ತದೆ.
ಒಂದು ವೇಳೆ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಂಡರೂ ಸಹ, ಉತ್ತಮ ನೆಟ್ ರನ್ ರೇಟ್ನೊಂದಿಗೆ ಟಾಪ್ -4 ರಲ್ಲಿ ಸ್ಥಾನ ಪಡೆದು ಪ್ಲೇಆಫ್‌ಗೆ ಹೋಗಬಹುದಾಗಿದೆ. ಅಂದಹಾಗೆ, ಆರ್‌ಸಿಬಿ ಮೇ 17 ರಂದು ಪಂಜಾಬ್ ಕಿಂಗ್ಸ್ ಮತ್ತು ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಎದುರಿಸಲಿದೆ.
ಈ ಎರಡೂ ಪಂದ್ಯಗಳನ್ನು ಗೆದ್ದರೆ, ಆರ್‌ಸಿಬಿಗೆ 20 ಅಂಕಗಳು ದೊರೆಯುತ್ತವೆ. ಇದರಿಂದ ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಮಾತ್ರವಲ್ಲದೆ, ಅಗ್ರ 2 ರಲ್ಲಿ ಸ್ಥಾನ ಪಡೆಯುತ್ತಾರೆ. ಈ ರೀತಿ ಆದರೆ, ಆರ್‌ಸಿಬಿಗೆ ಫೈನಲ್ ತಲುಪಲು ಎರಡು ಅವಕಾಶಗಳಿರುತ್ತವೆ.
ಉಳಿದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಒಂದು ಪಂದ್ಯ ಗೆದ್ದರೆ, ತಂಡಕ್ಕೆ 18 ಅಂಕಗಳು ದೊರೆಯುತ್ತವೆ. ಆಗಲೂ ಅವರು ಪ್ಲೇಆಫ್ ತಲುಪಬಹುದು. ಆದಾಗ್ಯೂ, ಫೈನಲ್ ತಲುಪಲು ಅವರು ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ -2 ಪಂದ್ಯಗಳನ್ನು ಆಡಬೇಕಾಗಬಹುದು.
ಒಂದು ವೇಳೆ ಉಳಿದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಸೋತರೆ, ಆರ್‌ಸಿಬಿ 16 ಅಂಕಗಳೊಂದಿಗೆ ಉಳಿಯುತ್ತದೆ. ಆಗಲೂ ಪ್ಲೇಆಫ್ ತಲುಪುವ ಅವಕಾಶ ಆರ್‌ಸಿಬಿಗೆ ಇದೆ. ಆದಾಗ್ಯೂ, ಇದು ಇತರ ತಂಡಗಳ ಫಲಿತಾಂಶಗಳು ಮತ್ತು ನೆಟ್ ರನ್ ರೇಟ್ ಅನ್ನು ಅವಲಂಬಿಸಿರಬಹುದು.
ಹೀಗಾಗಿ ಆ ರೀತಿ ಆಗದಿರಲಿ ಮತ್ತು ಎರಡೂ ಪಂದ್ಯಗಳನ್ನು ಆರ್‌ಸಿಬಿ ಗೆಲ್ಲಲಿ ಎಂದು ಕ್ರೀಡಾಭಿಮಾನಿಗಳು ಆಶಿಸುತ್ತಿದ್ದಾರೆ.

