ಶಿವಮೊಗ್ಗ,ಷಟಲ್ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಶಿವಮೊಗ್ಗದ ಅವಳಿ ಸಹೋದರರಾದ ಪವನ್ ಎಸ್. ಮತ್ತು ಪುನೀತ್ ಎಸ್. ಇದೀಗ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.
ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಗುರುಪುರದಲ್ಲಿರುವ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈ ಅವಳಿ ಸಹೋದರರು, ಕ್ರೀಡೆ ಮತ್ತು ವಿದ್ಯಾಭ್ಯಾಸ ಎರಡರಲ್ಲೂ ಸಮಾನ ಆಸಕ್ತಿ ತೋರಿಸಿ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮೇ 3ರಿಂದ 10ರವರೆಗೆ ನಡೆದ 19 ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಪವನ್ ಹಾಗೂ ಪುನೀತ್ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ರಾಷ್ಟ್ರೀಯ ಡಬಲ್ಸ್ ರ‍್ಯಾಂಕಿಂಗ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟವಾಡಿದ ಈ ಜೋಡಿ, ಅಂತಿಮ ಹಣಾಹಣಿಯಲ್ಲಿ ಅಸ್ಸಾಂನ ಅನಯನ್ ಬೋರ್ ಮತ್ತು ಕೇರಳದ ಬಿಜಾರ್ನ್ ಜೈಸನ್ ವಿರುದ್ಧ 21-19, 21-10 ಅಂತರದ ಭರ್ಜರಿ ಜಯ ಸಾಧಿಸಿ ಮಿಕ್ಸ್ಡ್
ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಜೊತೆಗೆ ಬಂಗಾರದ ಪದಕ, ಆಕರ್ಷಕ ಪಾರಿತೋಷಕ ಹಾಗೂ ₹82 ಸಾವಿರ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಈ ಸಾಧನೆಯೊಂದಿಗೆ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿರುವುದು ಮತ್ತೊಂದು ವಿಶೇಷ. ಇದೇ ಸಾಧನೆಯ ಆಧಾರದಲ್ಲಿ ಜೂನ್ 26ರಿಂದ ಜಪಾನ್‌ನಲ್ಲಿ ನಡೆಯಲಿರುವ ಅಂಡರ್-19 ಏಷ್ಯನ್ ಗೇಮ್ಸ್ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡದ ಪರವಾಗಿ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ಪುರಲೆ ವೆಂಕಟೇಶ ನಗರ ನಿವಾಸಿಗಳಾದ ಸುರೇಶ್ ಮತ್ತು ಶಕುಂತಲಾ ದಂಪತಿಯ ಪುತ್ರರಾದ ಈ ಪ್ರತಿಭೆಗಳು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಖ್ಯಾತ ಕೋಚ್ ಮಧುಸೂಧನ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

