ಶಿವಮೊಗ್ಗ,ಇಂದಿರಾ ಪ್ರಕಾಶ್ ಅಕಾಡೆಮಿಯಲ್ಲಿ 11.05.2026ರ ಸೋಮವಾರ ಸಂಜೆ 6:30ಕ್ಕೆ ತಾಯಂದಿರ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ಭಾವಪೂರ್ಣವಾಗಿ ಆಚರಿಸಲಾಯಿತು.
ಈ ವಿಶೇಷ ಕಾರ್ಯಕ್ರಮವನ್ನು ಆಚರಿಸೋಣ ಎಂಬ ಆಲೋಚನೆಯನ್ನು ಡಾ. ಇಂದಿರಾ ಪ್ರಕಾಶ್ ಎಸ್.ಎಸ್ ಅವರು ತಮ್ಮ ಗೆಳತಿಯಾದ ಶ್ರೀಮತಿ ಅನಿತಾ ಸೂರ್ಯ ರವರಿಗೆ ತಿಳಿಸಿದಾಗ, ಅವರು ತುಂಬಾ ಸಂತೋಷದಿಂದ ಸ್ಪಂದಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಶ್ರೀಮತಿ ಅನಿತಾ ಸೂರ್ಯ ರವರ ಮೂಲಕ ಹಿರಿಯ ಮಾತೆಯರಿಗೆ ಈ ಸಂದರ್ಭದಲ್ಲಿ ಗೌರವ ಸನ್ಮಾನ ಮಾಡಲಾಯಿತು.“ದೇವರಿಗಿಂತ ಹೆಚ್ಚು ತಾಯಿ” ಎಂಬ ಸಂದೇಶವನ್ನು ಶ್ರೀಮತಿ ಡಾ. ಭಾಗ್ಯಲಕ್ಷ್ಮಿ ಆಚಾರ್ ಅವರು ಚಿಕ್ಕಚೊಕ್ಕದಾಗಿ ಮನಮುಟ್ಟುವ ರೀತಿಯಲ್ಲಿ ಅಭಿನಯಿಸಿ ಕಾರ್ಯಕ್ರಮದಲ್ಲಿ ನೆರದಿದ್ದ ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸಿದರು.
ಶ್ರೀಮತಿ ಜಯಶ್ರೀ ಗಣೇಶ್ ರವರು ತಾಯಿಯ ಮಹತ್ವವನ್ನು ಸಾರುವ ಭಾವಪೂರ್ಣ ಕವನವನ್ನು ವಾಚಿಸಿದರು. ಸೇವಾದಳದ ಶ್ರೀಮತಿ ಸಾವಿತ್ರಿ ಮೇಡಂ ರವರು ಸಹ ವೇದಿಕೆಯನ್ನು ಅಲಂಕರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಕಾರ್ಯಕ್ರಮದಲ್ಲಿ ಮಾತೆಯರಿಗಾಗಿ ಹಲವು ಮನರಂಜನಾ ಆಟಗಳನ್ನು ಆಯೋಜಿಸಿ, ಸಂತೋಷದ ಕ್ಷಣಗಳನ್ನು ಎಲ್ಲರೂ ನೆನಪಿನಂಗಳದಲ್ಲಿ ಕೂಡಿಟ್ಟರು.ಇದೇ ಸಂದರ್ಭದಲ್ಲಿ “ಅಜ್ಜಿ ಮನೆ ಬೇಸಿಗೆ ಶಿಬಿರ”ದ ಮಕ್ಕಳು ಕೇವಲ ಐದು ದಿನಗಳಲ್ಲಿ ಕಲಿತ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದರು.
ನೃತ್ಯ, ಕಥೆ, ಮಂತ್ರಘೋಷ, ಆಧ್ಯಾತ್ಮಿಕತೆ ಹಾಗೂ ಸಂಸ್ಕೃತ ಭಾಷೆಯ ಪರಿಚಯವನ್ನು ಮಕ್ಕಳು ಅತ್ಯಂತ ಮನೋಜ್ಞವಾಗಿ ಪ್ರಸ್ತುತ ಪಡಿಸ್ಸಿದರು. ಮಕ್ಕಳ ಪ್ರತಿಭೆಗೆ ಮೆಚ್ಚಿದ ನಿವೃತ್ತ ಶಿಕ್ಷಕಿಯೂ ಹಾಗೂ ಸೇವಾದಳದಲ್ಲಿ ಸೇವೆ ಸಲ್ಲಿಸಿದ ಶ್ರೀಮತಿ ಸಾವಿತ್ರಿ ಮೇಡಂ ರವರು ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.
ಇಂದಿರಾ ಪ್ರಕಾಶ್ ಅಕಾಡೆಮಿಯ ಸಂಸ್ಥಾಪಕರಾದ ಡಾ. ಇಂದಿರಾ ಪ್ರಕಾಶ್ ಎಸ್.ಎಸ್ ರವರು ತಾಯಂದಿರ ಮಹತ್ವದ ಕುರಿತು ಮಾತನಾಡುತ್ತಾ, “ಮುಂದಿನ ಪೀಳಿಗೆಯಲ್ಲಿ ವೃದ್ಧಾಶ್ರಮಗಳ ಅವಶ್ಯಕತೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದೆ” ಎಂದು ತಿಳಿಸಿದರು.
“ತಾಯಿ ತ್ಯಾಗಮಯಿ ಅವಳ ತ್ಯಾಗವನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಭೂಮಿತಾಯಿಯಂತೆ ಮಾತೆಯೂ ಸಹ ಸಹನೆಯ ಪ್ರತಿರೂಪ” ಎಂದು ಅವರು ಭಾವಪೂರ್ಣವಾಗಿ ಹೇಳಿದರು.ಶ್ರೀಮತಿ ಅನಿತಾ ಸೂರ್ಯ ರವರು ಸಹ ತಾಯಂದಿರ ಆರೈಕೆ ಮತ್ತು ಕಾಳಜಿಯ ಮಹತ್ವದ ಬಗ್ಗೆ ಮನದಟ್ಟುವಂತೆ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಸುಶೀಲಾ ಷಣ್ಮುಗಂ ರವರು ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಅನಿತಾ ಸೂರ್ಯ ರವರು ಸ್ವಾಗತಿಸಿದರು. ಶ್ರೀಯುತ ಮಂಜುನಾಯ್ಕ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅಂತಿಮವಾಗಿ ನೃತ್ಯ ಶಿಕ್ಷಕರಾದ ಶ್ರೀಯುತ ಪ್ರಮೋದ್ ರವರು ವಂದನಾರ್ಪಣೆ ಮಾಡಿದರು.
ತಾಯಿಯ ಪ್ರೀತಿ, ತ್ಯಾಗ ಮತ್ತು ಮಮತೆಯನ್ನು ಸಾರಿದ ಈ ಕಾರ್ಯಕ್ರಮ ಎಲ್ಲರ ಮನದಲ್ಲಿ ಅಳಿಯದ ನೆನಪಾಗಿ ಉಳಿಯಿತು.

