ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಕ್ಕಿಂತಲೂ, ಈಗ ರಾಜ್ಯದಲ್ಲಿ ಟಿವಿಕೆ ಸರ್ಕಾರ ರಚನೆ ಪ್ರಯತ್ನ ಹೆಚ್ಚು ಸದ್ದು ಮಾಡಲಾರಂಭಿಸಿದೆ. ಏಕೆಂದರೆ ಸರ್ಕಾರ ರಚನೆಗೆ ಮನವಿ ಮಾಡಲು ಸಮಯಾವಕಾಶ ನೀಡುವಂತೆ, ತಮಿಳುನಾಡು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಟಿವಿಕೆ ವಿಜಯ್ ಅವರಿಗೆ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಗತ್ಯ ಸಂಖ್ಯಾಬಲದೊಂದಿಗೆ ಭೇಟಿ ಮಾಡಲು ಬರುವಂತೆ ಸೂಚನೆ ನೀಡಿದ್ದಾರೆ.
ತಮಿಳು ಸಮಯಂ ವಾಹಿನಿಯ ವರದಿಯ ಪ್ರಕಾರ, ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ಸರ್ಕಾರ ರಚನೆಯ ಕುರಿತು ಪತ್ರ ಸಂದೇಶ ಬಂದಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣಕ್ಕೆ, ಟಿವಿಕೆ ಸರ್ಕಾರ ರಚನೆಯ ಹಕ್ಕೋತ್ತಾಯ ಮಂಡಿಸಿದೆ.
ಇನ್ನು ಹೊಸ ಸರ್ಕಾರ ರಚನೆಯ ಹಾದಿಯಲ್ಲಿ ತನ್ನದೇ ಆದ ಕರ್ತವ್ಯಗಳಲ್ಲಿ ನಿರತವಾಗಿರುವ ತಮಿಳುನಾಡು ಲೋಕಭವನ (ಈ ಹಿಂದೆ ರಾಜಭವನ), ಸದ್ಯಕ್ಕೆ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದಿಂದ ರಾಜೀನಾಮೆ ಪಡೆದಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಲೋಕಭವನ ತಿಳಿಸಿದೆ.
ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಜಯ ಇತಿಹಾಸ ನಿರ್ಮಿಸಿದೆಯಾದರೂ, ವಿಜಯ್ ಬಹುಮತಕ್ಕೆ ಅನ್ಯ ಪಕ್ಷಗಳ ಮೇಲೆ ಅವಲಂಬಿತರಾಗಿದ್ದಾರೆ. ಐದು ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಈಗಾಗಲೇ ವಿಜಯ್ ಅವರಿಗೆ ಬೆಂಬಲ ಘೋಷಣೆ ಮಾಡಿದೆ. ಅದೇ ರೀತಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದೊಂದಿಗೆ, ಟಿವಿಕೆ ನಾಯಕರು ಮಾತುಕತೆಯಲ್ಲಿ ನಿರತರಾಗಿದ್ದಾರೆ.
ಹಾಗೆಯೇ ತಲಾ ಎರಡು ಸ್ಥಾನಗಳನ್ನು ಗೆದ್ದಿರುವ ಸಿಪಿಐ ಮತ್ತು ಸಿಪಿಎಂ ಒಂದು ವೇಳೆ ಟಿವಿಕೆಗೆ ಬೆಂಬಲ ನೀಡಿದರೆ, ವಿಜಯ್ ಅವರ ಸಂಖ್ಯಾಬಲ 119 ಆಗುತ್ತದೆ. ಇದು ಸರಳ ಬಹುಮತಕ್ಕಿಂತ (118) ಒಂದು ಸಂಖ್ಯೆ ಹೆಚ್ಚು. ಹೀಗಾಗಿ ಮಾತುಕತೆಗಳು ಜೋರಾಗಿ ನಡೆಯುತ್ತಿವೆ. ರಾಜ್ಯಪಾಲರು ಕೂಡ ಅಗತ್ಯ ಸಂಖ್ಯಾಬಲದ ನಂತರವೇ ಭೇಟಿ ಉತ್ತಮ ಎಂಬ ಸಂದೇಶ ಕಳುಹಿಸಿರುವುದು, ಟಿವಿಕೆ ಸರ್ಕಾರ ರಚನೆಯ ಪ್ರಯತ್ನಗಳನ್ನು ಮತ್ತಷ್ಟು ಕುತೂಹಲಕಾರಿಯಾಗಿಸಿದೆ.

