ಶಿರಸಿ | ವೈದ್ಯರ ಹತ್ಯೆ ಪ್ರಕರಣ ; ತೀರ್ಥಹಳ್ಳಿಯ ವ್ಯಕ್ತಿ ಬಂಧನ

ಉತ್ತರ ಕನ್ನಡ

ಶಿರಸಿ, ನಗರದ ಅಯುರ್ವೇದ ವೈದ್ಯರೊಬ್ಬರನ್ನು ಕೊಲೆ ಮಾಡಿ ನಗದು, ಆಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಳಲೂರಿನ ಮಂಜುನಾಥ ಪಾಂಡುರಂಗ ನಾಯ್ಕ (68) ಬಂಧಿತ.ನಗರದ ಕೆಎಚ್‌ಬಿ ಕಾಲೊನಿ ಹೊಸ ಬಡಾವಣೆ ನಿವಾಸಿ ಡಾ. ರಮೇಶ ಕಲಘುಟಕ‌ (51) ಹತ್ಯೆಗೀಡಾದವರು.

ಏ.20ರಂದು ಇವರ ಎರಡನೇ ವಿವಾಹ ನಿಗದಿಯಾಗಿತ್ತು. ಇದಕ್ಕಾಗಿ ಮನೆಯಲ್ಲಿ 150 ಸಾವಿರ ನಗದು ಹಾಗೂ 710 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಇಟ್ಟಿದ್ದರು. ಇವುಗಳ ಮೇಲೆ ಕಣ್ಣಿಟ್ಟಿದ್ದ ಪರಿಚಿತ ಮಂಜುನಾಥ ನಾಯ್ಕ, ಭಾನುವಾರ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ವೈದ್ಯರನ್ನು ಕೊಲೆಗೈದು ಪರಾರಿಯಾಗಿದ್ದ. ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿದ ಕುಟುಂಬಸ್ಥರಿಗೆ ಕೊಲೆ ನಡೆದಿರುವುದು ತಿಳಿದಿತ್ತು.

ಡಿಎಸ್ಪಿ ಗೀತಾ ಪಾಟೀಲ ಹಾಗೂ ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸವರಾಜ ಕನಶೆಟ್ಟಿ ಮತ್ತು ತಂಡವು ಕಾರ್ಯಾಚರಣೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ನೆರವಿನೊಂದಿಗೆ ಕೇವಲ 6 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ಚಿನ್ನಾಭರಣವನ್ನು ವಶಕ್ಕೆ ಪಡೆದ ತಂಡದ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಬಂಧಿತನನ್ನು ಕೋಟ್‌ರ್ಗೆ ಹಾಜರುಪಡಿಸಿ ಜೈಲಿಗೆ ಕಳಿಸಲಾಗಿದೆ.

Author