ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದ ಫಲಿತಾಂಶ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಾಳೆ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ನ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿ, ವಿದ್ಯಾರ್ಥಿಗಳ ಫಲಿತಾಂಶ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಲಾಗಿತ್ತು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ.ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದರೂ ಫಲಿತಾಂಶದಲ್ಲಿ ಗೈರು ಎಂದು ನಮೂದಿಸುವುದು, ಫಲಿತಾಂಶಗಳನ್ನು ನಿಗದಿತ ಸಮಯಕ್ಕೆ ಪ್ರಕಟಿಸದಿರುವುದು, ಅಂಕಗಳಲ್ಲಿ ವ್ಯತ್ಯಾಸ ಕಂಡುಬರುವುದು, ಫಲಿತಾಂಶದಲ್ಲಿ ವಿವಿಧ ರೀತಿಯ ದೋಷಗಳು ಉಂಟಾಗುವುದು, ವಿಷಯವಾರು ಫಲಿತಾಂಶದಲ್ಲಿ ಗೊಂದಲಗಳು ಕಂಡುಬರುವುದು ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ನಂತರವೂ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಮರುಕಳಿಸುತ್ತಿವೆ.

ಫಲಿತಾಂಶದಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ವಿದ್ಯಾರ್ಥಿಗಳು ಪದೇಪದೇ ವಿಶ್ವವಿದ್ಯಾಲಯದ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟವಾಗದಿರುವುದರಿಂದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಪ್ರವೇಶ, ಉದ್ಯೋಗಾವಕಾಶಗಳು ಹಾಗೂ ಶೈಕ್ಷಣಿಕ ಪ್ರಗತಿಗೂ ತೊಂದರೆಯಾಗುತ್ತಿದೆ.

ಒಂದೇ ರೀತಿಯ ಸಮಸ್ಯೆಗಳು ಪ್ರತಿ ಸೆಮಿಸ್ಟರ್‌ನಲ್ಲೂ ಮರುಕಳಿಸುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ವಿಶ್ವವಿದ್ಯಾಲಯದ ಫಲಿತಾಂಶ ವ್ಯವಸ್ಥೆಯ ಕುರಿತು ಅಸಮಾಧಾನ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಫಲಿತಾಂಶಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವುದು, ಫಲಿತಾಂಶಗಳನ್ನು ನಿಗದಿತ ಸಮಯಕ್ಕೆ ಪ್ರಕಟಿಸುವುದು, ಅಂಕಗಳ ಹಾಗೂ ಫಲಿತಾಂಶದಲ್ಲಿನ ದೋಷಗಳನ್ನು ತ್ವರಿತವಾಗಿ ಸರಿಪಡಿಸುವುದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಸರಿಯಾದ ಫಲಿತಾಂಶ ನೀಡುವುದು ಹಾಗೂ ಮರುಮೌಲ್ಯಮಾಪನದ ಫಲಿತಾಂಶಗಳನ್ನು ನಿಗದಿತ ಅವಧಿಯಲ್ಲಿ ಪ್ರಕಟಿಸುವ ಮೂಲಕ ಫಲಿತಾಂಶ ಪ್ರಕಟಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಾತರಿಪಡಿಸುವಂತೆ ಎನ್‌ಎಸ್‌ಯುಐ ಶಿವಮೊಗ್ಗ ವಿಶ್ವವಿದ್ಯಾಲಯ ಆಡಳಿತವನ್ನು ಆಗ್ರಹಿಸುತ್ತದೆ. ಎಂದು ತಿಳಿಸಿದೆ

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಫಲಿತಾಂಶಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ದಿನಾಂಕ 16/09/2026 ರಂದು ಬೆಳಿಗ್ಗೆ 10:30 ಗಂಟೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ಕಚೇರಿ ಮುಂಭಾಗದಲ್ಲಿ ಎನ್‌ಎಸ್‌ಯುಐ ಶಿವಮೊಗ್ಗದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ.

ಆದ್ದರಿಂದ, ಫಲಿತಾಂಶದ ಸಮಸ್ಯೆಗಳಿಂದ ತೊಂದರೆಗೊಳಗಾಗಿರುವ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ, ತಮ್ಮ ಶೈಕ್ಷಣಿಕ ಹಕ್ಕುಗಳು ಹಾಗೂ ನ್ಯಾಯಯುತ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತಬೇಕೆಂದು ಎನ್‌ಎಸ್‌ಯುಐ ಶಿವಮೊಗ್ಗ ಮನವಿ ಮಾಡಿದೆ.

Author