ಶಿವಮೊಗ್ಗದ ಬುದ್ಧನಗರ 1ನೇ ಕ್ರಾಸ್ ಭಾಗದಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿ ಮಾಂಸವನ್ನು ಜಪ್ತಿ ಮಾಡಿದ್ದಾರೆ.
ಈ ಅಕ್ರಮ ಕಸಾಯಿಖಾನೆಯ ಜಾಲದ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸುಮಾರು 12 ದಿನಗಳ ಹಿಂದೆಯೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರಿಗೆ ಮಾಹಿತಿ ರವಾನಿಸಿದ್ದರು.
ಇಂದು ಮತ್ತೆ ಕಾರ್ಯಕರ್ತರು ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ಅಕ್ರಮ ಮಾರಾಟ ನಡೆಯುತ್ತಿರುವ ಸ್ಥಳದ ಕುರಿತು ಮಾಹಿತಿ ನೀಡಿದ್ದರು. ಆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬುದ್ಧನಗರದ ಅಡ್ಡೆ ಮೇಲೆ ದಾಳಿ ನಡೆಸಿದರು.
ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಜಿಗಟ್ಟಲೆ ಗೋಮಾಂಸವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.





