ಮಹಾರಾಜ ಟ್ರೋಪಿ ಗೆದ್ದ ಶಿವಮೊಗ್ಗ ಯೋಧಾಸ್‌ಗೆ ಅದ್ದೂರಿ ಅಭಿನಂದನೆ

ಕ್ರೀಡೆ

ಶಿವಮೊಗ್ಗ, ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಿನ್ನೆ ಹಬ್ಬದ ವಾತಾವರಣ.೧೭ ವರ್ಷಗಳ ನಂತರ ಮಹಾರಾಜ ಟ್ರೋಪಿ (ಕೆಪಿಎಲ್) ಗೆದ್ದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳ ಉಪಸ್ಥಿತಿಯಲ್ಲಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್. ಅರುಣ್ ಮಾತನಾಡಿ, ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕನಸು ನನಸಾಗಿದೆ. ಶಿವಮೊಗ್ಗ ಯೋಧಾಸ್‌ನ ಸಿಇಓ ಮಿಥುನ್ ಹಾಗೂ ತಂಡದ ಆಟಗಾರರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದ್ದು, ಇದು ಹೀಗೆ ಮುಂದುವರೆಯಲಿ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರಿಕೆಟ್‌ನಲ್ಲಿ ಸಾಧನೆ ಮಾಡುವ ಮೂಲಕ ಈ ಬಾರಿ ಕಪ್ ನಮ್ಮದೇ ಎನ್ನುವುದನ್ನು ನನಸು ಮಾಡಿದ್ದಾರೆ. ಇದು ಇಂದಿನ ಯುವ ಪೀಳಿಗೆಗೆ ಪ್ರೊತ್ಸಾಹದಾಯಕವಾಗಿದೆ ಎಂದರು. ರಾಜ್ಯದ ಬಲಿಷ್ಠ ಐದು ತಂಡಗಳನ್ನು ಸೋಲಿಸಿ ಮಹಾರಾಜ ಕಪ್ ಎತ್ತಿ ಹಿಡಿದ ಶಿವಮೊಗ್ಗ ಯೋಧಾಸ್ ನ ಎಲ್ಲಾ ಕ್ರಿಕೆಟಿಗರಿಗೆ ಹಾಗೂ ಸಹ ಸಿಬ್ಬಂದಿಗಳಿಗೆ ಕಾರ್ಯಕ್ರಮದಲ್ಲಿ ಮೈಸೂರು ಪೇಟಾ ತೊಡಿಸಿ ಗೌರವಿಸಲಾಯಿತು. ಆಟಗಾರರು ಗೆದ್ದ ಕಪ್ ಎತ್ತಿ ಹಿಡಿದು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಯೋಧಾಸ್ ತಂಡ ವಿಜೇತವಾಗಿದ್ದಕ್ಕೆ ಗೆದ್ದ ೧೫ ಲಕ್ಷರೂ.ಗಳ ಪೈಕಿ ೫ ಲಕ್ಷರೂಗಳನ್ನು ರಣಜಿಯಲ್ಲಿ ಶಿವಮೊಗ್ಗವನ್ನು ಪ್ರತಿನಿದಿಸಿದ್ದ ಹಾಗೂ ಕ್ರಿಕೆಟ್ ಆಡುವಾಗಲೇ ಹೃದಯಘಾತದಿಂದ ನಿಧನರಾದ ಆಟಗಾರ ಅಕ್ಷಯ್ ಕುಟುಂಬಕ್ಕೆ ಸಿಇಓ ಮಿಥುನ್ ನೀಡಿದ್ದು ಕ್ರಿಕೆಟಿಗರಲ್ಲಿನ ಮಾನವೀಯತೆಗೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಅತಿಥಿಗಳಾಗಿ ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜಿ.ಪಂ. ಸಿಇಓ ಹೇಮಂತ್‌ಕುಮಾರ್ ಭಾಗವಹಿಸಿದ್ದರು. ಕ್ರಿಕೆಟ್ ಅಕಾಡೆಮಿಯ ಶಿವಮೊಗ್ಗ ವಲಯ ಛೇರ್‍ಮನ್ ನಾಗೇಂದ್ರ ಪಂಡಿತ್, ಪ್ರಮುಖರಾದ ಸದಾನಂದ್, ಸುಕುಮಾರ್, ಐಡಿಯಲ್ ಗೋಪಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ಸಂಜೆ ನಗರದ ಬೆಕ್ಕಿನ ಕಲ್ಮಠದ ಬಳಿಯಿಂದ ತೆರೆದ ವಾಹನದಲ್ಲಿ ವಿಜೇತ ಕ್ರಿಕೆಟ್ ಆಟಗಾರರ ಮೆರವಣಿಗೆ ಆರಂಭವಾಗಿ ಬಿ.ಹೆಚ್. ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ ಮೂಲಕ ನವುಲೆ ಕೆಎಸ್‌ಸಿಎ ಕ್ರೀಡಾಂಗಣ ತಲುಪಿತು.

Author