ಶಿವಮೊಗ್ಗ,ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕೈಗೊಳ್ಳಲಾಗಿರುವ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣವಾಗದಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ವಿವಿಧ ಇಲಾಖೆಗಳ ಪರಸ್ಪರ ಸಮನ್ವಯತೆಯಿಂದ ಕೂಡಲೇ ಕಾರ್ಯಪ್ರವೃತ್ತರಾಗಿ ಕೈಗೊಂಡ ಕಾಮಗಾರಿಗಳಿಗೆ ವೇಗ ಹೆಚ್ಚಿಸುವಂತೆ ಸಂಸದ ಬಿ.ವೈ ರಾಘವೇಂದ್ರರವರು ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಅಧಿಕಾರಿಗಳ ಸಮ್ಮುಖದಲ್ಲಿ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ, ಅರಣ್ಯ ಸಂಬಂಧಿ ಸಮಸ್ಯೆಗಳು, ಹಾಗೂ ಭೂಸ್ವಾಧೀನಪಡಿಸಿಕೊಂಡ ರೈತರುಗಳಿಗೆ ಅಗತ್ಯ ಪರಿಹಾರ ನೀಡಿರುವ ಬಗ್ಗೆ ಹಾಗೂ ವಿವಿಧ ರಸ್ತೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ 206 ತುಮಕೂರು-ಹೊನ್ನಾವರ ರಸ್ತೆಯ ಶಿವಮೊಗ್ಗ-ಆನಂದಪುರಂ ರಸ್ತೆ, ಎಲ್.ಸಿ-110 ಹೊಸೂರು ಹಾಗೂ ಎಲ್.ಸಿ 152 ತಾಳಗುಪ್ಪ ರೈಲ್ವೆ ಮೇಲ್ಸೇತುವೆ, ಸಾಗರ ಪಟ್ಟಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಹಾಗೂ ವಿವಿಧ ಮುಖ್ಯ ರಸ್ತೆಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಬೈಪಾಸ್ ರಸ್ತೆಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-169 ಶಿವಮೊಗ್ಗ-ಮಂಗಳೂರು ರಸ್ತೆಯ ನೆಲ್ಲಿಸರ ಕ್ಯಾಂಪ್ ನಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಚತುಷ್ಪಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-766 ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಬಿಕ್ಕೋಡಿ ಬಳಿ ಎರಡು ಭಾರಿ ಸೇತುವೆ ಹಾಗೂ ದ್ವಿಪಥ ರಸ್ತೆ ನಿರ್ಮಾಣ, ಶಿಕಾರಿಪುರ ಬೈಪಾಸ್ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 169ಎ ಮೇಗರವಳ್ಳಿಯಿಂದ ಆಗುಂಬೆ ವರೆಗೆ ದ್ವಿಪಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-13 ರ ಶಿವಮೊಗ್ಗದಿಂದ ಚಿತ್ರದುರ್ಗದ ವರೆಗೆ ಬಾಕಿ ಉಳಿದ ಭಾಗಗಳ ರಸ್ತೆ, (ಚಿತ್ರದುರ್ಗ, ಚನ್ನಗಿರಿ, ಹೊಳೆಹೊನ್ನೂರು, ಶಿವಮೊಗ್ಗ ಬೈಪಾಸ್ ರಸ್ತೆ) ಹಾಗೂ 3 ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, ಹಾಗೂ ಇನ್ನಿತರೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲಿಸಿದರು.
ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಅಧಿಕಾರಿಗಳಾದ ಬಿ ಟಿ ಶ್ರೀಧರ್ ರವರು ಮಾತನಾಡಿ, ಅರಣ್ಯ ಬಿಡುಗಡೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ವಿಳಂಬ ಮತ್ತು ಅದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರವಾಗಿ ಸಭೆಗೆ ವಿವರಿಸಿ, ಈ ತಿಂಗಳ ಅಂತ್ಯದೊಳಗೆ ಎಲ್ಲಾ ಅರಣ್ಯ ಬಿಡುಗಡೆ ಸಂಬಂಧ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿಯನ್ನು ಅನುಷ್ಟಾನಗೊಳಿಸಲು ಸಹಕಾರ ನೀಡುವಂತೆ ಸಭೆಯಲ್ಲಿ ಹಾಜರಿದ್ದ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೋರಿದರು.
ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಮಾತನಾಡುತ್ತಾ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅನುಷ್ಟಾನದಲ್ಲಿ ಭೂ ಪರಿಹಾರ ಪಡೆಯಲು ದಾಖಲೆ ನೀಡದೇ, ಸಹಕರಿಸದ ಭೂ ಮಾಲೀಕರ ಭೂ ಪರಿಹಾರ ಮೊತ್ತವನ್ನು ತುರ್ತಾಗಿ ನ್ಯಾಯಾಲಯಕ್ಕೆ ಜಮೆ ಮಾಡಲು ಸಾಗರ ಮತ್ತು ಶಿವಮೊಗ್ಗ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.
ಪೋಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಕಾಮಗಾರಿಗಳ ಅಡೆ-ತಡೆಗಳನ್ನು ನಿವಾರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ಅನುಷ್ಟಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳಿಗೆ ಸಂಸದರ ಕಟ್ಟುನಿಟ್ಟಿನ ಆದೇಶ:• ಗುಣಮಟ್ಟಕ್ಕೆ ಮೊದಲ ಆದ್ಯತೆ : ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಉತ್ತಮ ಗುಣಮಟ್ಟದ ರಸ್ತೆ ಮತ್ತು ಅತ್ಯಂತ ಸುರಕ್ಷಿತ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು ಸೂಚಿಸಿದರು. •
ವಿಳಂಬಕ್ಕೆ ತಡೆ :
ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆಯ ತಾಂತ್ರಿಕ ಅನುಮತಿಗಳು ಮತ್ತು ಇತರ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಯಾವುದೇ ಕಾಮಗಾರಿಗಳು ವಿಳಂಬವಾಗದಂತೆ ನೋಡಿಕೊಳ್ಳಲು ಸೂಚಿಸಿದರು.•
ಸುಗಮ ಸಂಚಾರ :
ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಹೆದ್ದಾರಿಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.• ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಪರಸ್ಪರ ಸಮನ್ವಯತೆಯನ್ನು ತೊಡಗಿಸಿಕೊಂಡು ಪುನ: ವಿಳಂಬಕ್ಕೆ ಅವಕಾಶ ನೀಡದೇ ತುರ್ತಾಗಿ ಅನುಷ್ಟಾನಗೊಳಿಸುವಂತೆ ಕ್ರಮ ವಹಿಸಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಅಧಿಕಾರಿಯಾದ ಬಿ ಟಿ ಶ್ರೀಧರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹನುಮಂತಪ್ಪ, ಸಾಗರ, ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ಮತ್ತು ಶಿವಮೊಗ್ಗ ಉಪ ವಿಭಾಗಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.
