ಶಿವಮೊಗ್ಗ,ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶಾಸಕ ಗೋಪಾಲ ಕೃಷ್ಣ ಬೇಳೂರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈಶ್ವರಪ್ಪ ಅವರು ಪದೇ ಪದೇ ಕಾಂಗ್ರೆಸ್ ಹಾಗೂ ಮುಸ್ಲಿಮರ ವಿರುದ್ಧ ಮಾತನಾಡುವುದನ್ನು ಟೀಕಿಸಿದರಲ್ಲದೆ , “ಬಿಜೆಪಿಯಲ್ಲೇ ಅವರ ರಾಜಕೀಯಕ್ಕೆ ಭವಿಷ್ಯ ಇಲ್ಲ. ಪಕ್ಷಕ್ಕೆ ಹೋದರೂ ಟಿಕೆಟ್ ಸಿಗುವುದಿಲ್ಲ” ಎಂದು ಭವಿಷ್ಯ ನುಡಿದದರು.
ಹಿಂದುತ್ವ ಎಂದವರನ್ನು ಬಿಜೆಪಿ ಮೂಲೆ ಗುಂಪು ಮಾಡಿದೆ. ಅದರಂತೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅನಂತಕುಮಾರ್ ಹೆಗಡೆ ಅವರಂತಹ ನಾಯಕರನ್ನು ಬಿಜೆಪಿ ಕಡೆಗಣಿಸಿದೆ. ಅದರಂತೆ ಈಶ್ವರಪ್ಪನವರನ್ನೂ ಮೂಲೆ ಗುಂಪು ಮಾಡಲಿದ್ದಾರೆ ಎಂದು ಹೇಳಿದರು.
“ಶಿವಮೊಗ್ಗದಲ್ಲಿ ಗೊಂದಲ ಸೃಷ್ಟಿಸುವ ರಾಜಕೀಯ ನಡೆಯುವುದಿಲ್ಲ. ಮುಂದಿನ ವಿಧಾನಸಭ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಪ್ ಸ್ಟೋರೇಜ್ ಯೋಜನೆಗೆ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ ಬೇಳೂರು, “ಪರಿಸರದ ಬಗ್ಗೆ ಕಾಳಜಿ ಇದ್ದರೆ ಲಕ್ಷಾಂತರ ಮರಗಳು ನಾಶವಾಗುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಯಾಕೆ ವಿರೋಧಿಸಲಿಲ್ಲ?” ಎಂದು ಪ್ರಶ್ನಿಸಿದರು.
ಹಿರಿಯ ನಾಯಕರಾಗಿರುವ ಕಾರಣ ಗೌರವವಿದೆ, ಆದರೆ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಈಶ್ವರಪ್ಪ ಅವರಿಗೆ ಸಲಹೆ ನೀಡಿದರು.ಅಡಿಕೆ, ಏರ್ಪೋರ್ಟ್, ವಿದ್ಯುತ್ ಖಾಸಗೀಕರಣ ಸೇರಿ ಹಲವು ವಿಚಾರಗಳ ಪ್ರಸ್ತಾಪಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಉಂಟಾಗಿರುವ ತೊಂದರೆಯಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಡಿಕೆ ಬೆಲೆ ಈಗಾಗಲೇ ಸುಮಾರು ₹5,000ರವರೆಗೆ ಇಳಿದಿದ್ದು, ಕೇಂದ್ರ ಸರ್ಕಾರ ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉಡಾನ್ ಯೋಜನೆಯಡಿ ಹೆಚ್ಚಿನ ವಿಮಾನ ಸೇವೆ ಕಲ್ಪಿಸಬೇಕಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದರು.
ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ರೈತರು ಹಾಗೂ ವಿದ್ಯುತ್ ನೌಕರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಬೇಸೂರು ಭಾಗದಲ್ಲಿ ಪ್ರಸ್ತಾಪವಾಗಿದ್ದ ಅಣು ವಿದ್ಯುತ್ ಸ್ಥಾವರ ಯೋಜನೆ ಸಂಪೂರ್ಣವಾಗಿ ರದ್ದಾಗಿದ್ದು, ರೈತರ ಆತಂಕ ದೂರವಾಗಿದೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿ ಹಾಗೂ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಎಂ. ಶ್ರೀಕಾಂತ್, ಶಂಕರ ಘಟ್ಟ ರಮೇಶ್, ಹುಲ್ತಿಕೊಪ್ಪ , ಶಿಜು.ಪಾಶ ಉಪಸ್ಥಿತರಿದ್ದರು.
