ಶಿವಮೊಗ್ಗ | ಗೃಹಜ್ಯೋತಿ ಯೋಜನೆಯ ಮನೆ-ಮನೆ ಪರಿಶೀಲನೆ ಕಾರ್ಯ ; ನೀವು ನೀಡಬೇಕಿದೆ ಈ ದಾಖಲೆ!

ಶಿವಮೊಗ್ಗ

ಶಿವಮೊಗ್ಗ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ‌ ಒಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಪುನರ್ ಪರಿಶೀಲನೆ ಪ್ರಾರಂಭಿಸಿದೆ. ಇದರ ಭಾಗವಾಗಿ ಪ್ರತಿ ಮನೆಗೂ ಮೀಟರ್ ರೀಡರ್ ಹಾಗೂ ಲೈನ್​​ಮ್ಯಾನ್​​ಗಳ ಮೂಲಕ ಗೃಹ ಜ್ಯೋತಿ ಬಳಕೆದಾರರ ಪರಿಶೀಲನೆ ನಡೆಸುತ್ತಿದೆ.

ಮೀಟರ್ ರೀಡರ್ ಹಾಗೂ ಲೈನ್​​ಮ್ಯಾನ್​​ಗಳು ಪ್ರತಿ‌ ಮನೆಗೂ ತೆರಳಿ, ಮನೆಯಲ್ಲಿ ವಾಸ ಮಾಡುತ್ತಿರುವವರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ‌.

ಯಾವ ಮಾಹಿತಿ ಪಡೆಯುತ್ತಿದ್ದಾರೆ: ಮೀಟರ್ ರೀಡರ್ ಮತ್ತು ಲೈನ್​​ಮ್ಯಾನ್​​ಗಳು ಒಟ್ಟಿಗೆ ತೆರಳಿ ಮನೆಯಲ್ಲಿ ವಾಸ ಮಾಡುವವರ ಬಳಿ, ಇದು ಸ್ವಂತ ಮನೆಯೇ, ಬಾಡಿಗೆ ಮನೆಯೇ ಮನೆಯಲ್ಲಿ ಎಷ್ಟು ಜನ ವಾಸವಾಗಿದ್ಧೀರಿ, ನೀವು ಯಾವ ಜಾತಿ, ಜಾತಿ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿದ್ಯುತ್ ಮೀಟರ್ ಬಿಲ್ ಹೀಗೆ ಹಲವು ದಾಖಲೆಗಳನ್ನು ಸರ್ಕಾರ ಹೇಳಿದಂತೆ ಪಡೆದು ಅದನ್ನು ಮೊದಲು ಮೊಬೈಲ್ ಆ್ಯಪ್​​ನಲ್ಲಿ ಅಪ್​ಲೋಡ್​ ಮಾಡಿಕೊಂಡು ನಂತರ ಆಫ್‌ಲೈನ್ ಅರ್ಜಿಯನ್ನು ತುಂಬುತ್ತಾರೆ.

ಅದಕ್ಕೆ ಮನೆಯಲ್ಲಿ ವಾಸವಾಗಿರುವವರ ಬಳಿ ಸಹಿ ಪಡೆದು ತೆರಳುತ್ತಿದ್ದಾರೆ‌.ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ ಈ ಹಿಂದೆ ಆನ್‌ಲೈನ್​ನಲ್ಲಿ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದವರು ಈಗ ಮನೆಗೆ ಬರುವ ಮೆಸ್ಕಾಂ ಸಿಬ್ಬಂದಿಗೆ ತಮ್ಮ ಮಾಹಿತಿಯನ್ನು ನೀಡಬೇಕು.

ಈ ವೇಳೆ ಆನ್​​ಲೈನ್​​ನಲ್ಲಿ ಅರ್ಜಿ ತುಂಬುವ ವೇಳೆ ಮನೆಯಲ್ಲಿ ಇರುವವರ ಫೋಟೋವನ್ನು ತೆಗೆದುಕೊಂಡು ಅಪ್​​ಲೋಡ್ ಮಾಡುತ್ತಾರೆ. ಜೊತೆಗೆ ಆಧಾರ್​​ನಲ್ಲಿರುವ ಮೊಬೈಲ್ OTP ಬರುತ್ತದೆ. ಇದರಿಂದ ಎಲ್ಲ ಗೃಹ ಜ್ಯೋತಿ ಬಳಕೆದಾರರು ಕಡ್ಡಾಯವಾಗಿ ಆಧಾರ್​​ನಲ್ಲಿರುವ ಮೊಬೈಲ್ ನಂಬರ್ ಇಟ್ಟುಕೊಳ್ಳಬೇಕು.

ಒಂದು ವೇಳೆ ಆಧಾರ್​​ನಲ್ಲಿನ ನಂಬರ್ ಬದಲಾವಣೆ ಮಾಡಬೇಕಾದರೆ ತಕ್ಷಣದಿಂದಲೇ ನಂಬರ್ ಬದಲಾಯಿಸಿಕೊಳ್ಳಬೇಕು. ಆನ್​​ಲೈನ್, ಆಫ್​​ಲೈನ್ ಪ್ರಕ್ರಿಯೆ ಮುಗಿಸಲು ಕನಿಷ್ಠ 8 ನಿಮಿಷ ಬೇಕಾಗುತ್ತದೆ. ಇದೆಲ್ಲಾ ಮುಗಿದ ನಂತರ ಗ್ರಾಹಕರ ಮೊಬೈಲ್​ಗೆ ಒಂದು ಮೇಸೆಜ್ ಬರುತ್ತದೆ. ನಂತರ ಆಫ್​​ಲೈನ್​​ನಲ್ಲಿ ತುಂಬಿದ ಅರ್ಜಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ‌.

ಇದರಿಂದ ಗೃಹಜ್ಯೋತಿ ಯೋಜನೆಗೆ ಬಳಕೆದಾರರಾಗಬೇಕಾದರೆ, ಮೊದಲು ಆಧಾರ್ ಕಾರ್ಡ್​ನಲ್ಲಿ‌ ಮೊಬೈಲ್ ನಂಬರ್ ಬಳಕೆಯಲ್ಲಿರಬೇಕು. ವೋಟರ್​ ಐಡಿ ಸರಿಯಾಗಿರಬೇಕು. ಅವಶ್ಯಕವಿದ್ದರೆ ಜಾತಿ ಪ್ರಮಾಣ ಪತ್ರ, ಬಾಡಿಗೆ ಮನೆಯಲ್ಲಿದ್ರೆ, ಮನೆಯ ಕರಾರುಪತ್ರ ಜೊತೆಯಲ್ಲಿಟ್ಟು ಕೊಳ್ಳಬೇಕು.‌ ಇದರಲ್ಲಿ ತೆರಿಗೆದಾರರಾಗಿದ್ದರೆ, ಅವರು ತಮ್ಮ ಪಾನ್​​ಕಾರ್ಡ್ ಸಹ ನೀಡಬೇಕು.

Author