ಅಮೃತ್ಸರದ ನಕಲಿ ಗೋಲ್ಡ್ ಶಿವಮೊಗ್ಗದಲ್ಲಿ ; ಓರ್ವನ ಬಂಧನ,ದೊಡ್ಡಪೇಟೆ ಪೊಲೀಸರ ಮುಂದಿದೆ ಬಿಗ್ ಚಾಲೆಂಜ್..?

ಕ್ರೈಂ

ಶಿವಮೊಗ್ಗದಲ್ಲೊಂದು ನಕಲಿ ಚಿನ್ನ ಅಡವಿಟ್ಟ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣ ಹಲವು ರೋಚಕ ತಿರುವುಗಳಲ್ಲಿ ಕೂಡಿದೆ.

ಇನ್ಸ್ಪೆಕ್ಟರ್ ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ನಾರಾಯಣ ಮಧುಗಿರಿ ನೇತೃತ್ವದಲ್ಲಿ ಈ ಪ್ರಕರಣ ತನಿಖೆ ಮುಂದುವರೆದಿದೆ.

ಪ್ರಕರಣ ವಿವರ : ತೀರ್ಥಹಳ್ಳಿಯ ಲೋಕೇಶ್, ಮಲವಗೊಪ್ಪದ ಸುಧಾ ಹಾಗೂ ಗಾಜನೂರಿನ ರಾಜೇಶ್ ಈ ಮೂವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟಿದ್ದರು.ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಪರಿಶೀಲನೆ ಮಾಡಿದಾಗ ಇದು ನಕಲಿ ಚಿನ್ನವೆಂಬುದು ಗೊತ್ತಾಗಿದೆ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ಪ್ರಕರಣ ಗಂಭೀರ ಅರಿತು ಈ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು,ಚಿನ್ನ ಅಡವಿಟ್ಟಿದ್ದ ತೀರ್ಥಹಳ್ಳಿ ಲೋಕೇಶ್ ಬಂಧಿಸಿದ್ದಾರೆ.

ನಂತರ ಗಾಜನೂರಿನ ರಾಜೇಶ್ ತಾನು ಮೋಸ ಹೋಗಿರುವುದು ತಿಳಿದು ಸ್ವಂತ ಹಣ ನೀಡಿ ಅಡವಿಟ್ಟ ಚಿನ್ನ ಬಿಡಿಸಿಕೊಂಡಿದ್ದಾರೆ ಹಾಗೂ ಪೊಲೀಸರ ಮುಂದೆ ತಾನು ಮೋಸ ಹೋಗಿರುವ ವಿಚಾರ ಒಪ್ಪಿಕೊಂಡಿದ್ದಾರೆ.

ಇನ್ನು ಪ್ರಕರಣದ ಆರೋಪಿ ತೀರ್ಥಹಳ್ಳಿ ಲೋಕೇಶ್ ನ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಒಂದೊಂದೇ ಮಾಹಿತಿ ಆಚೆ ಬರಲು ಆರಂಭಿಸಿದೆ ಅದೇನಂದರೆ ಇದೆ ತೀರ್ಥಹಳ್ಳಿ ಲೋಕೇಶ್ ಹೆಸರಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ಎರಡು ಬ್ರಾಂಚ್ ನಲ್ಲಿ ಹಾಗೂ ಸಿರಿ ಸೌಹಾರ್ದ ಬ್ಯಾಂಕ್ ನ 3 ಕಡೆ ಬ್ರಾಂಚ್ ನಲ್ಲಿ ಹಾಗೂ ತೀರ್ಥಹಳ್ಳಿ ವರ್ತಕರ ಸಂಘ ಇಷ್ಟು ಕಡೆ ನಕಲಿ ಚಿನ್ನ ಅಡವಿಟ್ಟು ಇರುವುದನ್ನು ಬಾಯಿ ಬಿಟ್ಟಿರುತ್ತಾನೆ.

ನಂತರ ನಕಲಿ ಚಿನ್ನ ಎಲ್ಲಿಂದ ಬಂತು ಅಂತ ಪೊಲೀಸರು ವಿಚಾರಿಸಿದಾಗ ಸುನಿಲ್ ಸುಮಂತ್ ಅವರು ಮತ್ತು ರಾಹುಲ್ ಮೇಗರವಳ್ಳಿ ಮರಳು ವ್ಯಾಪಾರಿ ಕಡೆ ಬೆರಳು ತೋರಿಸಿದ್ದಾರೆ.

ಇನ್ನು ಇವರಿಗೆ ಯಾರು ಮುಖ್ಯ ಕಿಂಗ್ ಪಿನ್ ಅಂತ ತನಿಖೆ ಮುಂದುವರೆಸಿದಾಗ ಶರತ್, ನಿತಿನ್ ಶೆಟ್ಟಿ ಹಾಗೂ ಅರುಣ್ ಎಂಬ ವಿಷಯ ಪೊಲೀಸರಿಗೆ ತಿಳಿಯಿತು.

ಇನ್ನು ಇದೆ ಶರತ್ ಹಾಗೂ ನಿತಿನ್ ಶೆಟ್ಟಿ HDFC ಗೋಲ್ಡ್ ಲೋನ್ ನಲ್ಲಿ ನಕಲಿ ಚಿನ್ನ ಅಡವಿಟ್ಟು ನಂತರ ಅಲ್ಲಿ ಅದನ್ನ ಯಾರಿಗೆ ತಿಳಿಯದಂತೆ ಬಗೆಹರಿಸಿ ಚಿನ್ನ ಬಿಡಿಸಿಕೊಂಡು ಹೋಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ತಿಳಿದಿದೆ.

ಇನ್ನು ಇದೆ ರೀತಿಯ ಘಟನೆ ಬ್ರಹ್ಮಾವರದಲ್ಲೂ ಸಹ ನಡೆದಿರುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಪಡೆದಿದೆ. ಅಲ್ಲಿಯೂ ಸಹ ಇದೆ ಶರತ್, ನಿತಿನ್ ಶೆಟ್ಟಿ ನಕಲಿ ಚಿನ್ನ ಅಡವಿಟ್ಟು ನಂತರ ತನಿಖೆಯಲ್ಲಿ ಸರಿಯಾದ ಸಾಕ್ಷಾಧಾರಗಳ ಕೊರತೆಯಿಂದ ಬಚಾವಾಗಿದ್ದು ಬೆಳಕಿಗೆ ಬಂದಿದೆ.

ಇನ್ನು ಈ ಶರತ್, ನಿತಿನ್ ಶೆಟ್ಟಿ ಹಾಗೂ ಅರುಣ್ ಈ ಮೂವರು ಅಮೃತಸರ ಹಾಗೂ ದೆಹಲಿಯಿಂದ 10% ನಕಲಿ ಚಿನ್ನ ತಂದು ಅದನ್ನು 916 ಹಾಲ್ಮರ್ಕ್ ಗೋಲ್ಡ್ ಆಗಿ ಪರಿವರ್ತಿಸಿ ಕೆಲವರ ಕೈಯಲ್ಲಿ ಅಡವಿಡಿಸುತ್ತಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಈ ಬಂಗಾರ ಹೇಗಂದ್ರೆ ಒಂದು ಗ್ರಾಂ ಗೋಲ್ಡ್ ನ ಬಂಗಾರದ ರೀತಿಯ ತರಹ ಇದ್ದು ಇದಕ್ಕೆ ಮೇಲಿನಿಂದ ಕೋಟೆಡ್ ಮಾಡಿ ಬಂಗಾರವನ್ನು ಲೇಪಿಸಿ ಮಹಿಳೆಯರು ಬಳಸುವ ಬಂಗಾರದ ಸಾಮಗ್ರಿಗಳನ್ನು ತಯಾರಿಸುವುದು ನಂತರ ಅದನ್ನು ಲಾಕಿಂಗ್ ಸಿಸ್ಟಮ್ ಇರುವ ಬ್ಯಾಂಕ್ ಸೊಸೈಟಿಗಳಲ್ಲಿ ಹಾಗೂ ಬಂಗಾರ ಅಡವಿಟ್ಟುಕೊಳ್ಳುವ ಫೈನಾನ್ಸ್ ಗಳಲ್ಲಿ ಈ ನಕಲಿ ಬಂಗಾರವನ್ನು ಅಡವಿಟ್ಟು ಹಣ ತೆಗೆದುಕೊಳ್ಳುತ್ತಾರೆ.

ಆದರೆ ನಂತರ ಆ ಹಣವನ್ನು ಕಟ್ಟದೆ ಬಂಗಾರವನ್ನು ಬಿಡಿಸಿಕೊಳ್ಳುವುದೇ ಇಲ್ಲ, ಇದು ಹರಾಜಿಗೆ ಬಂದಾಗ ಯಾರ ಹೆಸರಿಗೆ ಬಂಗಾರ ಇಟ್ಟಿರುತ್ತಾರೋ ಅವರ ಹೆಸರಿಗೆ ನೋಟಿಸ್ ಬರುತ್ತದೆ ಆಗ ಬಯಲಾಗುತ್ತದೆ ಇವರ ಅಸಲಿ ಬಣ್ಣ.

ಇನ್ನು ಈ ಶರತ್ ಶಿವಮೊಗ್ಗದಲ್ಲಿ ವೈಟ್ ಗೋಲ್ಡ್ ಬಯರ್ಸ್ ಅಂಗಡಿ ಇಟ್ಟುಕೊಂಡಿದ್ದು ಹಾಗೂ ನಿತಿನ್ ಶೆಟ್ಟಿ ಈ ಹಿಂದೆ ಕೊಪ್ಪದಲ್ಲಿ ಇದ್ದಿದ್ದು ಪ್ರಸ್ತುತ ಬೆಂಗಳೂರಿನ ಪಬ್ ಒಂದರಲ್ಲಿ ವೃತ್ತಿ ಮಾಡುತ್ತಿರುವುದು ತಿಳಿದಿದೆ.

ಇಲ್ಲಿವರೆಗೂ 26 ಲಕ್ಷ ಹಣದ ಅವ್ಯವಹಾರ ಬಗ್ಗೆ ಮಾಹಿತಿ ಪೊಲೀಸ್ ಇಲಾಖೆಗೆ ತಿಳಿದಿದ್ದು ಹಾಗೂ ಮತ್ತಷ್ಟು ನಕಲಿ ಬಂಗಾರ ಎಲ್ಲೆಲ್ಲಿ ಇಟ್ಟಿರಬಹುದು ಎಂದು ತನಿಖೆ ಮುಂದುವರೆಸಿದ್ದಾರೆ.

ಹಾಗೂ ಸದ್ಯಕ್ಕೆ ತೀರ್ಥಹಳ್ಳಿ ಲೋಕೇಶ್ ಮಾತ್ರ ಬಂಧನವಾಗಿದೆ. ಇನ್ನು ಉಳಿದಂತೆ ಮಲವಗೊಪ್ಪದ ಸುಧಾ ಹಾಗೂ ಶರತ್, ನಿತಿನ್ ಶೆಟ್ಟಿ ಹಾಗೂ ಅರುಣ್ ಕುಮಾರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಇನ್ನು ಈ ಮಾಯಜಾಲದ ಹಿಂದೆ ಕಾಣದ ದೊಡ್ಡ ದೊಡ್ಡ ಶಕ್ತಿಗಳು ಕೆಲಸ ಮಾಡುತ್ತಿರಬಹುದು ಎಂಬುದು ಪೊಲೀಸ್ ಇಲಾಖೆಯ ಅನುಮಾನವಾಗಿದೆ.

ಈ ಪ್ರಕರಣ ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆ ತಾಳಲಿದೆಯೋ,ಯಾರೆಲ್ಲ ದೊಡ್ಡ ಕುಳಗಳು ಇದರಲ್ಲಿ ಇದ್ದಾರೋ ಎಂಬುದು ಪೊಲೀಸ್ ತನಿಖೆಯಲ್ಲಿ ಸತ್ಯ ಹೊರಬೀಳಲಿದೆ. ಒಟ್ಟಾರೆ ಪೊಲೀಸ್ ಇಲಾಖೆಗೆ ಇದೊಂದು ದೊಡ್ಡ ಚಾಲೆಂಜ್ ಆಗಿರುವುದಂತು ಸುಳ್ಳಲ್ಲ.

Author