ಶಿವಮೊಗ್ಗ | ಅಜ್ಜಿ ಕೊಲೆಗೈದ ಮೊಮ್ಮಗ ; ಆರೋಪಿ ಕಾಲಿಗೆ ಪೊಲೀಸರ ಗುಂಡು

ಕ್ರೈಂ

ಶಿವಮೊಗ್ಗ, ನಗರದ ಮಿಳಘಟ್ಟದಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಈ ವೇಳೆ ದೊಡ್ಡಪೇಟೆ ಸಿಪಿಐ ಸತ್ಯನಾರಾಯಣ್ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಕೊಲೆ ಆರೋಪಿ ಕಿಶೋರ್ (28) ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಗಣೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ವಂತ ಅಜ್ಜಿಯನ್ನೇ ಕೊಂದಿದ್ದ ಮಿಳಘಟ್ಟದ ನಿವಾಸಿಯಾಗಿದ್ದ ಅಜ್ಜಿ ಸುಶೀಲಮ್ಮ (65) ಅವರ ತಲೆ ಮೇಲೆ ಬುಧವಾರ ಸೈಜುಗಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿದ್ದ ಕಿಶೋರ್ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.

ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಜಪೇಯಿ ಲೇಔಟ್‌ನಲ್ಲಿ ಆರೋಪಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಸಿಪಿಐ ನೇತೃತ್ವದ ತಂಡ ಮುಂಜಾನೆ ದಾಳಿ ನಡೆಸಿತ್ತು.

ಪೊಲೀಸರ ಮೇಲೆ ಹಲ್ಲೆ :

ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಸಿಬ್ಬಂದಿ ಗಣೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಸ್ಥಿತಿ ಕೈಮೀರಿದ ಹಿನ್ನಲೆ ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಶರಣಾಗದಿದ್ದಾಗ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬಿ. ನಿಖಿಲ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Author