ಶಿವಮೊಗ್ಗ | ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಗೆ ಹಲ್ಲೆ

ಕ್ರೈಂ

ಶಿವಮೊಗ್ಗ, ಸಾರ್ವಜನಿಕ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವುದನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಐದು ಜನರ ಪುಂಡರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಶಿವಮೊಗ್ಗದ ಗ್ರಾಮವೊಂದರಲ್ಲಿರುವ ದೂರುದಾರರು ತಮ್ಮ ಶುಂಠಿ ತೋಟವನ್ನು ನೋಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಎದುರುಗಡೆಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಒಟ್ಟು ಐದು ಜನ ಯುವಕರು ಬಂದಿದ್ದಾರೆ. ಆ ಪೈಕಿ ಒಂದು ಬೈಕ್ ಸವಾರ ರಸ್ತೆಯಲ್ಲೇ ಅತಿ ವೇಗವಾಗಿ ಬೈಕ್ ವೀಲಿಂಗ್ ಮಾಡುತ್ತಾ ಬರುತ್ತಿದ್ದನು. ಇದನ್ನು ಗಮನಿಸಿದ ದೂರುದಾರರು, ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುತ್ತಿರುತ್ತಾರೆ, ಈ ರೀತಿ ವೀಲಿಂಗ್ ಮಾಡಿದರೆ ತೊಂದರೆಯಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದಾರೆ.

ಇದರಿಂದ ಕೋಪಗೊಂಡ ಐದೂ ಜನ ಪುಂಡರು, ದೂರುದಾರರನ್ನು ಏಕವಚನದಲ್ಲಿ ನಿಂದಿಸಿ ಗಲಾಟೆ ಆರಂಭಿಸಿದ್ದಾರೆ. ನಾವು ಹೇಗೆ ಬೇಕಾದರೂ ಗಾಡಿ ಓಡಿಸುತ್ತೇವೆ, ಕೇಳಲು ನೀನ್ಯಾರು ಎಂದು ಜಗಳ ತೆಗೆದು, ಎಲ್ಲರೂ ಸೇರಿ ಅವರ ಮೈಕೈ, ಬೆನ್ನು ಹಾಗೂ ತಲೆಗೆ ಕೈಗಳಿಂದ ಮನಸೋಇಚ್ಛೆ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ದೂರುದಾರರಿಗೆ ಗಂಭಿರವಾಗಿ ಗಾಯಗಳಾಗಿವೆ.

ಇದೇ ವೇಳೆ ಆ ರಸ್ತೆಯಲ್ಲಿ ಬರುತ್ತಿದ್ದ ಇತರರು ಇದನ್ನು ಗಮನಿಸಿ ಬಿಡಿಸಿ ಕಳುಹಿಸಿದ್ದಾರೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Author