ಹೊಳೆಹೊನ್ನೂರು, ಸಮೀಪದ ಮಂಗೋಟೆಯಲ್ಲಿ ಭಾನುವಾರ ಹಳೆ ಸರ್ಕಾರಿ ಶಾಲಾ ಕಟ್ಟಡ ತೆರವು ಮಾಡುವುದನ್ನು ವಿರೊದ್ದಿಸಿ ಗ್ರಾಮಸ್ಥರು ಕುಟುಂಬಸ್ಥರೊಂದಿಗೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತ ಪಡಿಸಿ ಜೆಸಿಬಿ ಯಂತ್ರವನ್ನು ವಾಪಸ್ ಕಳಿಸಿದರು.
ಸರ್ಕಾರಿ ಆಸ್ತಿಯಾಗಿರುವ ಶಾಲಾ ಕಟ್ಟಡವನ್ನು ತೆರವು ಮಾಡದಂತೆ ಗ್ರಾಮಸ್ಥರು ಹತ್ತಾರು ಬಾರಿ ಹೇಳಿದರು ಕೇಳದೆ ಕುಟುಂಬವೊಂದು ಕಳೆದೆರಡು ದಿನಗಳಿಂದ ಶಾಲಾ ಕಟ್ಟಡ ತೆರವು ಮಾಡುತ್ತಿದೆ ಎಂದು ಆರೋಪಿಸಿ ಸ್ಥಳಕ್ಕೆ ತೆರಳಿ ಶಾಲಾ ಕಟ್ಟಡ ಬೀಳಿಸುತ್ತಿದ ಜೆಸಿಬಿ ಯಂತ್ರವನ್ನು ತಡೆದು ಮಾತಿನ ಚಕಮಕಿ ನಡೆಸಿದರು.

ಗ್ರಾಮಸ್ಥರು ಹಾಗೂ ಕುಟುಂಬಸ್ಥ ಮಧ್ಯೆ ವಾಗ್ವಾದ ಹೆಚ್ಚಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಯಿತ್ತು. ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂಬ ಮಾಹಿತಿಯಾಗಿದೆ.
ನ್ಯಾಯಲಯದ ಆದೇಶವಿದೆ ಎಂದು ನಕಲಿ ದಾಖಲೆಗಳನ್ನು ಮುಂದಿಟ್ಟುಕೊಂಡು ಸರ್ಕಾರಿ ಶಾಲೆಯನ್ನು ನೆಲ ಸಮ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು. ಸುಸ್ಥಿತಿಯಲ್ಲಿದ ಹಳೆ ಶಾಲಾ ಕಟ್ಟಡವನ್ನು ಜೆಸಿಬಿ ಯಂತ್ರ ಬಳಸಿ ಬೀಳಿಸಲಾಗಿದೆ. ಶಾಲೆಯ ಬಾಗಿಲು ಕಿಟಕಿ ಸೇರಿದಂತೆ ಮೇಲ್ಚಾವಣಿಯ ಕಬ್ಬಿಣವನ್ನು ಕಿತ್ತು ಮಾರಾಟ ಮಾಡಿದ್ದಾರೆ. ಶಾಲಾ ಕಟ್ಟಡಕ್ಕೆ ಅಳವಡಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ ತೆಗೆದುಕೊಂಡು ಹೋಗಿರುವ ಆನವೇರಿಯ ಗುಜರಿಯವರ ಮೇಲೆ ಕ್ರಮ ಜರುಗಿಸಬೇಕು ಎಂದು ಆರೋಪಿಸಿದ್ದಾರೆ.
ಶಾಲಾ ಕಟ್ಟಡ ತೆರವು ಮಾಡಿದ ಜೆಸಿಬಿ ಯಂತ್ರವನ್ನು ಕೂಡಲೆ ವಶಕ್ಕೆ ಪಡೆಯಬೇಕು. ಸರ್ಕಾರಿ ಶಾಲೆ ಬೀಳಿಸಿದವರ ಮೇಲೆ ಕಾನೂನು ಕ್ರಮ ಜರುಗಿಸುವ ವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಗ್ರಾಮಸ್ಥರು ಕುಳಿತರು.

ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಮಾತನಾಡಿದ ಹೊಳೆಹೊನ್ನೂರು ಠಾಣೆ ಪೊಲೀಸ್ ಅಧಿಕಾರಿ ಮನೋಹರ್ ಶಾಲಾ ಕಟ್ಟಡ ತೆರವು ಕೆಲಸವನ್ನು ನಿಲ್ಲಿಸುವಂತೆ ಹೇಳಲಾಗಿದ್ದು ಜೆಸಿಬಿ ಯಂತ್ರವನ್ನು ತೆಗೆದುಕೊಂಡು ಠಾಣೆಗೆ ಬರುವಂತೆ ಹೇಳಲಾಗಿದೆ.
ತಾತ್ಕಾಲಿವಾಗಿ ಹಳೆ ಶಾಲಾ ಕಟ್ಟಡದ ಬಳಿ ಯಾವುದೇ ತೆರವು ಕಾರ್ಯಚರಣೆ ಮಾಡದಂತೆ ಕುಟುಂಬಸ್ಥರಿಗೆ ತಿಳಿಸಲಾಗಿದೆ. ಗ್ರಾಮಸ್ಥರು ಹಾಗೂ ಇಲಾಖೆ ಅಧಿಕಾರಿಗಳು ಕಾನೂನು ಹೋರಾಟ ನಡೆಸಿ ತಮ್ಮೂರಿನ ಸ್ವತ್ತನ ಉಳಿಸಿಕೊಳ್ಳಬಹುದು ಎಂದರು.


