ಬೆಂಗಳೂರು, ವಿವಿಧ ಬ್ಯಾಂಕುಗಳಿಂದ ತೆಗೆದುಕೊಂಡಿದ್ದ ಸುಮಾರು 1,454 ಕೋಟಿ ರೂಪಾಯಿಗೂ ಅಧಿಕ ಸಾಲ ಮರುಪಾವತಿಯಾಗದ ಕಾರಣ ಸಾಲಕ್ಕೆ ‘ವೈಯಕ್ತಿಕ ಖಾತರಿದಾರ’ (ಪರ್ಸನಲ್ ಗ್ಯಾರಂಟರ್) ಆಗಿದ್ದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ‘ದಿವಾಳಿ’ ಎಂದು ನ್ಯಾಷನಲ್ ಕಂಪನಿ ನ್ಯಾಯಮಂಡಳಿ(ಎನ್‌ಸಿಎಲ್‌ಟಿ) ಘೋಷಣೆ ಮಾಡಿದೆ.
ಈ ಆದೇಶದಿಂದಾಗಿ ನಸೀರ್ ಅಹ್ಮದ್ ಅವರ ವಿಧಾನ ಪರಿಷತ್ ಸದಸ್ಯತ್ವ ಅನರ್ಹಗೊಳ್ಳಲಿದೆ ಎಂದು ಹೇಳಲಾಗಿದೆ. ಆದರೆ, ಅವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಇದೇ 30ಕ್ಕೆ ಮುಕ್ತಾಯವಾಗಲಿದೆ.
ಬೆಂಗಳೂರು ಮೂಲದ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯು 2018 ರಲ್ಲಿಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿತ್ತು. ಅದರ ಒಟ್ಟು ಮೊತ್ತ 1454.71 ಕೋಟಿ ರೂಪಾಯಿಗಳಾಗಿತ್ತು. ಆ ಸಾಲಕ್ಕೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ‘ವೈಯಕ್ತಿಕ ಖಾತರಿದಾರ’ (ಪರ್ಸನಲ್ ಗ್ಯಾರಂಟರ್) ಆಗಿದ್ದರು.
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಿಂದ ತೀರ್ಪುಸಾಲ ಮರು ಪಾವತಿಯಾಗದ ಕಾರಣ ಬ್ಯಾಂಕುಗಳು ದಿವಾಳಿತನ ಸಂಹಿತೆ – 2016ರಡಿ ಎನ್‌ಎಸ್‌ಎಲ್‌ಟಿ ಬೆಂಗಳೂರು ವಿಭಾಗದ ಮೊರೆ ಹೋಗಿದ್ದವು. ಆ ಅರ್ಜಿಗಳ ವಿಚಾರಣೆ ನಡೆಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಬೆಂಗಳೂರು ಪೀಠ ಈ ತೀರ್ಪು ನೀಡಿದೆ.
2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡಲಾಗಿತ್ತು. ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಕ್ಕಿಳಿಸಲಾಗಿತ್ತು.
ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಮತ್ತು ಹಕ್ಕುಗಳಿಗಾಗಿ ಧ್ವನಿ ಎತ್ತುವ ನಾಯಕರಾಗಿ ಗುರುತಿಸಿಕೊಂಡಿದ್ದರು. ಪಕ್ಷದ ಸಂಘಟನೆಯಲ್ಲಿ ಮತ್ತು ಚುನಾವಣಾ ಸಂದರ್ಭಗಳಲ್ಲಿ ಮುಸ್ಲಿಂ ಮತದಾರರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಸುದೀರ್ಘ ಕಾಲದಿಂದ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವು ಬಾರಿ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ (ವಿಶೇಷವಾಗಿ ಎಸ್‌ಎಂ ಕೃಷ್ಣ ಅವರ ಅವಧಿಯಲ್ಲಿ) ಸಣ್ಣ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನಾತ್ಮಕ ಜವಾಬ್ದಾರಿಗಳನ್ನು, ವಿಶೇಷವಾಗಿ ಅಲ್ಪಸಂಖ್ಯಾತ ಘಟಕದ ಉಸ್ತುವಾರಿಯನ್ನು ನಿರ್ವಹಿಸಿದ್ದರು.


