ಶಿವಮೊಗ್ಗ | ಪ್ರಿಯಕರನಿಂದಲೇ ಯುವತಿಯ ಖಾಸಗಿ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಲೀಕ್

ಕ್ರೈಂ

ಶಿವಮೊಗ್ಗ, ಪ್ರೀತಿಯ ಹೆಸರಿನಲ್ಲಿ ನಂಬಿಸಿ ಪಡೆದ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಂಡು, ನಕಲಿ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಯುವತಿಯ ಮಾನಹಾನಿ ಮಾಡಿರುವ ಆಘಾತಕಾರಿ ಘಟನೆಯೊಂದು ಶಿವಮೊಗ್ಗದಲ್ಲಿ ವರದಿಯಾಗಿದೆ.

ಸಂತ್ರಸ್ತ ಯುವತಿ ಮತ್ತು ಆರೋಪಿ ಯುವಕ ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಸ್ನೇಹದ ಸಲುಗೆಯ ದುರ್ಲಾಭ ಪಡೆದ ಆರೋಪಿ, ಪ್ರೀತಿಸುವುದಾಗಿ ನಂಬಿಸಿ ಯುವತಿಯನ್ನು ಪುಸಲಾಯಿಸಿದ್ದನು. ಆಕೆಯ ಮನವೊಲಿಸಿ ವಾಟ್ಸಾಪ್ ಮೂಲಕ ಖಾಸಗಿ ವಿಡಿಯೋ ಕರೆಗಳನ್ನು ಮಾಡಿದ್ದಲ್ಲದೆ, ಆಕೆಯ ಖಾಸಗಿ ಫೋಟೋಗಳನ್ನು ತರಿಸಿಕೊಂಡಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಯುವತಿಯು ಆತನೊಂದಿಗಿನ ಸಂಪರ್ಕವನ್ನು ಹಾಗೂ ಸಲುಗೆಯನ್ನು ಕಡಿಮೆ ಮಾಡಿದ್ದಳು. ಇದರಿಂದ ಕೆರಳಿದ ಆರೋಪಿಯು, ಆಕೆಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಲ್ಲದೆ, ಯುವತಿಯ ಹೆಸರಿನಲ್ಲಿಯೇ ವಿವಿಧ ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ, ಆಕೆ ಕಳುಹಿಸಿದ್ದ ಖಾಸಗಿ ಚಿತ್ರಗಳು, ವಿಡಿಯೋಗಳು ಹಾಗೂ ಆಕೆಯ ಮೊಬೈಲ್ ಸಂಖ್ಯೆಯನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ಈ ಮೂಲಕ ಸಾರ್ವಜನಿಕವಾಗಿ ಆಕೆಯ ತೇಜೋವಧೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಕೃತ್ಯದಿಂದ ನೊಂದ ಯುವತಿಯು ಇದೀಗ ಪೊಲೀಸರ ಮೊರೆ ಹೋಗಿದ್ದು, ಆರೋಪಿಯ ವಿರುದ್ಧ ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ಅಧಿಕೃತವಾಗಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Author