ಬೆಂಗಳೂರು, ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದ ಬಳಿಕವೂ, ಅದರ ನೋಂದಣಿ ಪ್ರಮಾಣಪತ್ರದಲ್ಲಿ (ಆರ್ಸಿ) ಅಧಿಕೃತವಾಗಿ ಮಾಲೀಕನ ಹೆಸರು ಬದಲಾವಣೆಯಾಗದಿದ್ದರೆ, ಆ ವಾಹನದಿಂದ ಸಂಭವಿಸುವ ಯಾವುದೇ ಅಪಘಾತದ ಸಂಪೂರ್ಣ ಜವಾಬ್ದಾರಿ ನೋಂದಾಯಿತ ಮಾಲೀಕನದ್ದೇ ಆಗಿರುತ್ತದೆ ಎಂದು ಹೈಕೋರ್ಟ್ ಮಹತ್ವದ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮೋಟಾರು ವಾಹನ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣವೊಂದರ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.
ಈ ಹಿಂದೆ ಮೋಟಾರು ವಾಹನ ಅಪಘಾತಗಳ ಪರಿಹಾರ ಕ್ಷೇಮು ನ್ಯಾಯಾಧಿಕರಣ ವಾಹನದ ಮೂಲ ಮಾಲೀಕ ಹಾಗೂ ಅದನ್ನು ಖರೀದಿಸಿದ ವ್ಯಕ್ತಿ ಇಬ್ಬರೂ ಸಮನಾಗಿ ಪರಿಹಾರದ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್, ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಮೂಲ ಮಾಲೀಕನಿಗೆ ನಿಗದಿಪಡಿಸಿದೆ.
ಮಾರತ್ಹಳ್ಳಿ ನಿವಾಸಿಯಾಗಿರುವ ಎ. ಸುನೀಲ್ ಕುಮಾರ್ ಎಂಬುವರು ತಾನು ಖರೀದಿಸಿದ್ದ ಬೈಕ್ ಅನ್ನು ತದನಂತರ ತಬ್ರೇಜ್ ಎಂಬುವರಿಗೆ ಮಾರಾಟ ಮಾಡಿದ್ದರು. 2020ರ ಜೂನ್ 18ರಂದು ಈ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಎಂಬುವರು ಮೃತಪಟ್ಟಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ ಮೃತನ ಕುಟುಂಬಕ್ಕೆ 33.07 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಹಾಗೂ ಈ ಮೊತ್ತವನ್ನು ಸುನೀಲ್ ಕುಮಾರ್ ಮತ್ತು ತಬ್ರೇಜ್ ಇಬ್ಬರೂ ಜಂಟಿಯಾಗಿ ಪಾವತಿಸುವಂತೆ ಆದೇಶಿಸಿತ್ತು.
ನ್ಯಾಯಾಧೀಕರಣದ ಈ ಆದೇಶವನ್ನು ಪ್ರಶ್ನಿಸಿ ವಾಹನದ ಮಾಲೀಕ ಸುನೀಲ್ ಕುಮಾರ್ ಹಾಗೂ ಖರೀದಿದಾರ ಶಬ್ರಿಜ್ ಹೈಕೋರ್ಟ್ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ, ಮೃತ ಹನುಮಂತ ಅವರ ಕುಟುಂಬಸ್ಥರು ತಮಗೆ ನೀಡಿರುವ ಪರಿಹಾರದ ಮೊತ್ತವನ್ನು ಇನ್ನಷ್ಟು ಹೆಚ್ಚಳ ಮಾಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಸುನೀಲ್ ಕುಮಾರ್ ಪರ ವಕೀಲರು, ತಮ್ಮ ಕಕ್ಷಿದಾರರು ವಾಹನವನ್ನು ತಬ್ರೇಜ್ ಎಂಬುವವರಿಗೆ ಹಿಂದೆಯೇ ಮಾರಾಟ ಮಾಡಿರುವುದಾಗಿ ವಾದ ಮಂಡಿಸಿದರು.
ಆದರೆ, ಈ ಖರೀದಿ ವ್ಯವಹಾರವನ್ನು ನಿರಾಕರಿಸಲಾಯಿತು. ವಾಹನದ ನೋಂದಣಿ ಪ್ರಮಾಣಪತ್ರವು ಅಪಘಾತದ ದಿನದವರೆಗೂ ಸುನೀಲ್ ಕುಮಾರ್ ಅವರ ಹೆಸರಿನಲ್ಲೇ ಮುಂದುವರಿದಿದ್ದನ್ನು ಗಮನಿಸಿದ ನ್ಯಾಯಾಲಯವು, ಪರಿಹಾರ ಪಾವತಿಸುವ ಕಾನೂನಾತ್ಮಕ ಜವಾಬ್ದಾರಿ ಅವರದ್ದೇ ಆಗಿರುತ್ತದೆ ಎಂದು ತಿಳಿಸಿತು.
ಮೃತನ ಕುಟುಂಬಕ್ಕೆ ನ್ಯಾಯಾಧೀಕರಣವು ನಿಗದಿಪಡಿಸಿದ್ದ 33.07 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು 47.15 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಿರುವ ಹೈಕೋರ್ಟ್, ಈ ಸಂಪೂರ್ಣ ಪರಿಷ್ಕೃತ ಮೊತ್ತವನ್ನು ವಾಹನದ ನೋಂದಾಯಿತ ಮಾಲೀಕ ಸುನೀಲ್ ಕುಮಾರ್ ಅವರೇ ಪಾವತಿಸಬೇಕು ಎಂದು ಆದೇಶಿಸಿದೆ.


