ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗಾಗಿ ಎಸ್​​ಒಪಿ ಬಿಡುಗಡೆ; ಚಾರಣಕ್ಕೆ ನೋ ಎಂಟ್ರಿ

ಕರ್ನಾಟಕ

ಬೆಂಗಳೂರು: ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.) ಯನ್ನು ಇಂದು ಬಿಡುಗಡೆ ಮಾಡಲಾಯಿತು.

ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣಪಥಗಳಲ್ಲಿ ಇನ್ನುಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.) ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರಿರುತ್ತಾರೆ.

ಎಲ್ಲ ಚಾರಣ ಪಥಗಳಲ್ಲಿ ಒಂದು ಸಾರಿಗೆ ಗರಿಷ್ಠ 150 ಜನರಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದರು.ಚಾರಣಕ್ಕೆ ಬರುವವರು ಆನ್​ಲೈನ್​ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು. ಗೈಡ್​ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ.

ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆಯುವಂತಾದ ಹಾಗೂ ಅರಣ್ಯ ವ್ಯಾಪ್ತಿಗೆ ಒಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಬಾಲಕಿ ಪತ್ತೆಯಾದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಈ ಎಸ್​​ಒಪಿ ರೂಪಿಸಲು ಸೂಚಿಸಿದ್ದಾಗಿ ತಿಳಿಸಿದರು.

ಜಿಪಿಎಸ್ ಅಳವಡಿಸಿದ ವಾಕಿಟಾಕಿ:

ಇನ್ನುಮುಂದೆ ಪ್ರತಿಯೊಂದು ಚಾರಣಪಥದಲ್ಲೂ ನೇಚರ್​ ಗೈಡ್​ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ, ಪ್ರತಿಯೊಬ್ಬ ಚಾರಣಿಗರ ಮೊಬೈಲ್​ಗೆ ಚಾರಣಪಥದ ನಕ್ಷೆ ಸಹಿತ ಆ್ಯಪ್ ಅನ್ನು ಅಳವಡಿಸಲಾಗುವುದು. ಅಕಸ್ಮಾತ್ ಯಾರೇ ಚಾರಣಿಗರು ದಾರಿ ತಪ್ಪಿದರೆ ಅವರ ಶೋಧಕ್ಕೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದರು.

ಬೇಸ್​ ಕ್ಯಾಂಪ್​ನಲ್ಲಿ ಮೂಲಸೌಕರ್ಯ:

ಚಾರಣ ಆರಂಭಕ್ಕೂ ಮುನ್ನ ಮೂಲ ನೆಲೆಯಲ್ಲಿ ಚಾರಣಿಗರಿಗೆ ಸಂಕ್ಷಿಪ್ತವಾಗಿ ಚಾರಣದ ದೂರ, ಅವಧಿ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುವುದು. ಅದೇ ರೀತಿ ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು ಎಂದು ತಿಳಿಸಲಾಗುವುದು.

ಹೆಚ್ಚು ಶಬ್ದ ಮಾಡುವ ಯಾವುದೇ ಸಾಧನಗಳಿಗೆ, ಹರಿತವಾದ ಲೋಹದ ವಸ್ತು, ಆಯುಧಗಳನ್ನು ತೆಗೆದುಕೊಂಡು ಹೋಗಲು ಮತ್ತು ಕ್ಯಾಂಪ್ ಫೈರ್ ಮಾಡಲು ಚಾರಣ ಪಥದಲ್ಲಿ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚಾರಣಿಗರಿಗೆ ಮೂಲ ನೆಲೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಚಾರಣ ಪಥದಲ್ಲಿ ಬೇಸ್ ಕ್ಯಾಂಪ್​ಗೆ ಹೋಗುವ ಮಾರ್ಗಸೂಚಿ, ಬಾಣದಾಕಾರದ ಗುರುತು ಹಾಕಲಾಗುವುದು. ಮಾರ್ಗಮಧ್ಯೆ ವಿರಮಿಸಿಕೊಳ್ಳಲು ವಿಶ್ರಾಂತಿ ತಾಣ ಮಾಡಲಾಗುವುದು ಎಂದರು.

ಗೈಡ್​ಗಳಿಗೆ ಹೊಣೆಗಾರಿಕೆ

ಇನ್ನುಮುಂದೆ ಪ್ರಕೃತಿ ಮಾರ್ಗದರ್ಶಕರು (ಗೈಡ್)ಗಳು ಯಾವುದೇ ಚಾರಣಿಗ ತಮಗಿಂತ ಮುಂದೆ ಹೋಗಿಲ್ಲ ಹಾಗೂ ಹಿಂದೆ ಉಳಿದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಬೇಸ್ ಕ್ಯಾಂಪ್, ವಿಶಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಚಾರಣಿಗರ ಎಣಿಕೆ ಮಾಡಬೇಕು.

ಪ್ರತಿ ಅರ್ಧಗಂಟೆಗೊಮ್ಮೆ ತಮ್ಮ ವಾಕಿಟಾಕಿ ಮೂಲಕ ಬೇಸ್ ಕ್ಯಾಂಪ್​ನೊಂದಿಗೆ ಸಂವಹನ ನಡೆಸಬೇಕು. ಚಾರಣಿಗರ ಜವಾಬ್ದಾರಿ ಹೊರುವಂತೆ ಅವರಿಗೆ ಹೊಣೆಗಾರಿಕೆ ನೀಡಲಾಗುವುದು. ಚಾರಣ ಆರಂಭವಾದ ಒಂದು ಗಂಟೆಯೊಳಗೆ ವಾಕಿಟಾಕಿ ಸಂವಹನ ಗೈಡ್ ಕಡೆಯಿಂದ ನಡೆಯದಿದ್ದರೆ, ಬೇಸ್ ಕ್ಯಾಂಪ್ ಸಿಬ್ಬಂದಿಯೇ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಅಗತ್ಯ:

ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಅವರ ಪಾಲಕರ, ಪೋಷಕರ ಅನುಮತಿ ಪತ್ರ ಕಡ್ಡಾಯ. ಅದೇ ರೀತಿ ಹಿರಿಯ ನಾಗರಿಕರು ಚಾರಣ ಕೈಗೊಳ್ಳಲು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಸದೃಢತೆಯ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ ಎಂದು ವಿವರಿಸಿದರು.

ಯಾವುದೇ ಚಾರಣಿಗರಿಗೆ ಆರೋಗ್ಯ ಸಮಸ್ಯೆಯಾದರೆ ಅವರ ಆರೈಕೆಗಾಗಿ ಗೈಡ್​ ತಮ್ಮ ಜೊತೆ ಪ್ರಥಮ ಚಿಕಿತ್ಸಾ ಕಿಟ್​ನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಫ್ಲಾಶ್​ ಬಳಸಿ ಫೋಟೋ ತೆಗೆಯುವುದನ್ನು, ಏಕಬಳಕೆ ಪ್ಲಾಸ್ಟಿಕ್ ಹಾಗೂ ಕ್ಯಾರಿ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ ತ್ಯಾಜ್ಯವನ್ನು ಚಾರಣಿಗರು ತಂದು ಬೇಸ್ ಕ್ಯಾಂಪ್​ನಲ್ಲೇ ವಿಲೇವಾರಿ ಮಾಡಬೇಕು. ಇದೆಲ್ಲವೂ ಎಸ್​​ಒಪಿಯಲ್ಲಿದೆ ಎಂದರು.

ಅರಣ್ಯ ವಿಹಾರ ತಾಣದಲ್ಲಿ ಎಲ್ಲ ಚಾರಣಪಥ

ಅರಣ್ಯ ಇಲಾಖೆ ವ್ಯಾಪ್ತಿಯ ಚಾರಣಪಥಗಳ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಆಗುವಂತೆ ಎಲ್ಲ ಚಾರಣಪಥಗಳನ್ನೂ https://aranyavihaara.karnataka.gov.in/ ಅಂತರ್ಜಾಲ ತಾಣದಲ್ಲಿ ಸೇರ್ಪಡೆ ಮಾಡುವಂತೆ ಸೂಚನೆ ನೀಡಿರುವುದಾಗಿಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ ಹಾಗೂ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Author