ಶಿವಮೊಗ್ಗ, ತಾಲೂಕಿನ ಗಾಜನೂರಿನ ತುಂತುರು ರೆಸಾರ್ಟ್ನಲ್ಲಿ ಮದುವೆ ಸಮಾರಂಭದ ವೇಳೆ ವಿದ್ಯುತ್ ಪ್ರವಹಿಸಿ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿ ಪ್ರಕರಣ ಸಂಬಂಧ ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಬ್ಬಲಗೆರೆಯ ಜನತಾ ಕಾಲೋನಿ ನಿವಾಸಿ ನಾಗಮ್ಮ (45) ಮೃತ ರಾದ ಕಾರಣ ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರ ವಿರುದ್ಧ ಪ್ರಕರಣ
ಕಳೆದ ಸೋಮವಾರ ರೆಸಾರ್ಟ್ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ನಾಗಮ್ಮ ಅವರು ಅಡುಗೆ ಬಡಿಸುವ ಮತ್ತು ಶುಚಿಗೊಳಿಸುವ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಸ್ಟೇಜ್ ಅಲಂಕಾರ ಮತ್ತು ಲೈಟಿಂಗ್ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಹರಿದ ವಿದ್ಯುತ್, ರೆಸಾರ್ಟ್ನ ಮುಳ್ಳುತಂತಿ ಬೇಲಿಗೆ ಪ್ರವಹಿಸಿತ್ತು. ಕೆಲಸ ಮಾಡುತ್ತಿದ್ದ ನಾಗಮ್ಮ ಅವರು ಆಕಸ್ಮಿಕವಾಗಿ ಮುಳ್ಳುತಂತಿ ಮುಟ್ಟಿದಾಗ ತೀವ್ರವಾಗಿ ವಿದ್ಯುತ್ ಶಾಕ್ ತಗುಲಿದೆ.ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರೆಸಾರ್ಟ್ ಮಾಲೀಕರು ಮತ್ತು ಅಲಂಕಾರಿಕ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ನಾಗಮ್ಮ ಅವರ ಅಳಿಯ ನಿಶ್ವಲ್ ದೂರು ನೀಡಿದ್ದಾರೆ. ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನೆಲೆ ರೆಸಾರ್ಟ್ ಮಾಲೀಕ, ಲೈಟಿಂಗ್ ಮತ್ತು ಸ್ಟೇಜ್ ಡೆಕೋರೇಷನ್ ಕೆಲಸಗಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ.


