ಶಿವಮೊಗ್ಗ | ಮಹಿಳೆಯ ಕಾರಿಗೆ ದಾರಿ ಬಿಡದೆ, ತೊಂದರೆ ನೀಡಿದ ಆಟೋ ಚಾಲಕರಿಬ್ಬರಿಗೆ ದಂಡ, ಎಚ್ಚರಿಕೆ..!

ಶಿವಮೊಗ್ಗ

ಶಿವಮೊಗ್ಗ, ದಿನಾಂಕ 06-04-2026 ರಂದು ನಗರದ ಉಷಾ ನರ್ಸಿಂಗ್ ಹೋಂ ವೃತ್ತದ ಬಳಿ ರಾಂಗ್ ಸೈಡ್​ನಲ್ಲಿ ಆಟೋ ಚಲಾಯಿಸಿಕೊಂಡು ಬಂದ ಆಟೋ ಚಾಲಕರಿಬ್ಬರು ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡದೆ ಅನುಚಿತ ವರ್ತನೆ ತೋರಿದ ಅವರಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ನೀಡಿರುವ ಘಟನೆ ಸಂಭವಿಸಿದೆ.

ಕಾರು ಚಲಾಯಿಸುತ್ತಿದ್ದ ಮಹಿಳೆಗೆ ದಾರಿ ಬಿಡದೆ ಅನುಚಿತವಾಗಿ ವರ್ತಿಸಿದ ಬಗ್ಗೆ ಆರೋಪ ಕೇಳಿಬಂದಿದೆ.

ಶಾಲೆಯಿಂದ ತನ್ನ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ, ಆಟೋ ಚಾಲಕರಿಬ್ಬರು ರಾಂಗ್ ಸೈಡ್‌ನಲ್ಲಿ ಬಂದು ಕಾರಿಗೆ ಅಡ್ಡ ನಿಲ್ಲಿಸಿ ತೊಂದರೆ ಕೊಟ್ಟಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಕ್ಷಣ ಆಕ್ಷನ್​ ತೆಗೆದುಕೊಂಡ ಟ್ರಾಫಿಕ್ ಪೊಲೀಸರು ಇಬ್ಬರೂ ಆಟೋ ಚಾಲಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ಮಹಿಳೆಯ ಕಾರಿಗೆ ದಾರಿ ಬಿಡದೆತಡೆಯೊಡ್ಡಿದ್ದಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಭಾರತೀಯ ಮೋಟಾರು ವಾಹನಕಾಯ್ದೆಯ (ಐ.ಎಂ.ವಿ ಕಾಯ್ದೆ)ಅಡಿಯಲ್ಲಿ ದಂಡ ವಿಧಿಸಿರುವ ಪೊಲೀಸರು, ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Author