ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೃತ ಮಗುವನ್ನು ಗೋಪಾಲಗೌಡ ಬಡಾವಣೆಯ ನಿವಾಸಿ ಮಂಜುನಾಥ್ ಅವರ ಪುತ್ರ ಆರ್ಯನ್ (1 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಮಂಜುನಾಥ್ ಅವರ ಎರಡನೇ ಮಗ ಆರುಷ್ ಖಾಸಗಿ ಶಾಲೆಯಲ್ಲಿ ಎಲ್ಕೆಜಿ ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನ ಶಾಲಾ ಬಸ್ ಮೂಲಕ ಮನೆಗೆ ಬಂದಿದ್ದನು.
ಆರುಷ್ನನ್ನು ಕರೆತರಲು ಮನೆಯ ಕೆಲಸದ ಮಹಿಳೆ ಆಶಾ ಅವರು ಬಸ್ ಬಳಿಗೆ ತೆರಳಿದ್ದರು. ಈ ವೇಳೆ ಅವರ ಹಿಂದೆಯೇ ಆರ್ಯನ್ ಕೂಡ ರಸ್ತೆಗೆ ಬಂದಿದ್ದಾನೆ.
ಆಶಾ ಅವರು ಆರುಷ್ನನ್ನು ಬಸ್ಸಿನಿಂದ ಇಳಿಸುತ್ತಿದ್ದ ಸಂದರ್ಭದಲ್ಲಿ, ಆರ್ಯನ್ ಬಸ್ನ ಮುಂಭಾಗದಿಂದ ರಸ್ತೆ ದಾಟಲು ಮುಂದಾಗಿದ್ದನು.
ಈ ಸಂದರ್ಭದಲ್ಲಿ ಮಗುವಿನ ಇರುವಿಕೆ ಗಮನಿಸದ ಬಸ್ ಚಾಲಕ ಉಮೇಶ್ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಪರಿಣಾಮ ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.
ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.



