ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆ,ಮಹಿಳಾ ಮೀಸಲು ನಿಗದಿಪಡಿಸಲು ಮುಂದಾದ ಕೇಂದ್ರ ಸರ್ಕಾರ

ರಾಜಕೀಯ

ಹೊಸದಿಲ್ಲಿ, ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆ ಜತೆಗೆ ಮಹಿಳಾ ಮೀಸಲು ನಿಗದಿಪಡಿಸಲು ಸರಕಾರ ಮುಂದಾಗಿದೆ. ಸದ್ಯದ 543 ಕ್ಷೇತ್ರಗಳನ್ನು 816 ಕ್ಕೆ ಹೆಚ್ಚಿಸುವ ಮೂಲಕ ಮಹಿಳೆಯರಿಗೆ 273 ಸ್ಥಾನ ಮೀಸಲಿಡಲು ನಿರ್ಧರಿಸಲಾಗಿದೆ.

ಕ್ಷೇತ್ರ ಪುನರ್‌ ವಿಂಗಡಣೆ ಕೈಗೆತ್ತಿಕೊಂಡಿರುವ ಕೇಂದ್ರ ಸರಕಾರ 2011 ರ ಜನಗಣತಿ ಆಧರಿಸಿ ಲೋಕಸಭೆ ಸಂಖ್ಯಾಬಲವನ್ನು 816ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರುವ ಮೂಲಕ ರಾಜಕೀಯದಲ್ಲಿ ಸ್ತ್ರೀ ಪ್ರಾತಿನಿಧ್ಯವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಅಂಗೀಕಾರಗೊಂಡಿರುವ ಮಹಿಳಾ ಮೀಸಲು ವಿಧೇಯಕದ ಅನುಸಾರ ಲೋಕಸಭೆಯಲ್ಲಿ ಮಹಿಳೆಯರಿಗೆ 273 ಸ್ಥಾನ ಮೀಸಲು ನೀಡಲು ಮಹತ್ವದ ತಿದ್ದುಪಡಿ ತರಲಾಗುತ್ತಿದೆ.

ನಾರಿ ಶಕ್ತಿ ಅಭಿನಂದನ್‌ ಅಧಿನಿಯಮ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ಕಲ್ಪಿಸುವ ಸಂಬಂಧ 2023ರ ಮಹಿಳಾ ಮೀಸಲು ವಿಧೇಯಕಕ್ಕೆ ಮಹತ್ವದ ತಿದ್ದುಪಡಿ (ನಾರಿ ಶಕ್ತಿ ಅಭಿನಂದನ್‌ ಅಧಿನಿಯಮ-2023) ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಮುಂದಿನ 2029ರ ಲೋಕಸಭಾ ಚುನಾವಣೆ ವೇಳೆ ಮಹಿಳೆಯರಿಗೆ ಮೀಸಲು ಸ್ಥಾನ ನಿಗದಿಪಡಿಸುವ ಸಂಬಂಧ ಪ್ರಸ್ತುತ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲಿತಿದ್ದುಪಡಿ ವಿಧೇಯಕ ಮಂಡಿಸಲು ನಿರ್ಧರಿಸಿದೆ. ಈ ಸಂಬಂಧ ರಾಜಕೀಯ ಪಕ್ಷಗಳ ಜತೆ ಸರಕಾರ ಸಮಾಲೋಚನೆ ನಡೆಸಿದೆ. ಪ್ರಸ್ತಾವಿತ ತಿದ್ದುಪಡಿ ವಿಧೇಯಕ ಕುರಿತು ಪ್ರತಿಪಕ್ಷಗಳ ನಾಯಕರ ಜತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚರ್ಚೆ ನಡೆಸುತ್ತಿದ್ದಾರೆ.

816ಕ್ಕೆ ಸದಸ್ಯ ಬಲ ಹೆಚ್ಚಳ ಇತ್ತೀಚೆಗೆ ನಡೆದ ಕೇಂದ್ರ ಸಂಪುಟದ ಸಂಸದೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ2029ರ ಲೋಕಸಭೆ ಚುನಾವಣೆಗೆ ಮಹಿಳಾ ಮೀಸಲು ಜಾರಿಗೊಳಿಸಲು ಕಾರ್ಯೋನ್ಮುಖವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದರು.

ಮೀಸಲು ನಿಗದಿಯಲ್ಲಿಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ನ್ಯಾಯಸಮ್ಮತವಾಗಿ ಸ್ಥಾನ ನಿಗದಿಪಡಿಸಲು ಮೀಸಲು ಸ್ಥಾನಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಶಾಸನ ಸಭೆಗಳಲ್ಲಿಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ನಾರಿಶಕ್ತಿ ಅಧಿನಿಯಮ ವಿಧೇಯಕ 2023ರಲ್ಲಿ ಅಗೀಕಾರವಾಗಿದೆ.

Author