ಸಿದ್ದಾಪುರ,ಅಕ್ರಮ ಸಂಬಂಧದ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಏಳು ಮಂದಿಯನ್ನು ಉತ್ತರ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಘಟನೆ ನಡೆದಿದ್ದು, ಜ್ಯೋತಿಷಿ ಕಮಲಾಕರ ಭಟ್ ಜೊತೆಯಲ್ಲಿ ಸುಚಿತ್ರಾ ಎಂಬ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು,
ಈ ಸಂಬಂಧ ದೂರು ನೀಡಿದ್ದರಿಂದ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವಿಚಾರವಾಗಿ ಮಹೇಶ್ ನಾಯ್ಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ಕಾರಣ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಮತ್ತು ಸಹಚರನಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಕಮಲಾಕರ ಭಟ್ ಸೇರಿ ಏಳು ಮಂದಿಯನ್ನು ಉತ್ತರ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಕಮಲಾಕರ್ ಮೂಲತಃ ಸಿದ್ದಾಪುರ ಮೂಲದ ಹೆಮ್ಮನಬೈಲ್ ಗ್ರಾಮದವರು. ಸ್ವಾಮೀಜಿ ಜೊತೆ ತಾಯಿಯ ಅಕ್ರಮ ಸಂಬಂಧದ ವಿಚಾರ ಸುಚಿತ್ರಾ ಪುತ್ರಿಗೆ ಗೊತ್ತಾಗಿದ್ದು, ವಿಚಾರವನ್ನು ತಂದೆ ಮಹೇಶ್ ನಾಯ್ಕಗೆ ಆಕೆ ತಿಳಿಸಿದ್ದಳು.
ಘಟನೆ ಸಂಬಂಧ ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಗುರೂಜಿ ಸೇರಿ 7 ಜನರನ್ನು ಪೊಲೀಸರು ವಶಕ್ಕೆ ವಡೆದಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಹಾಗೂ ಸಿದ್ದಾಪುರದಲ್ಲಿ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಪ್ರಕರಣದಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ ಎ3 ಅಪರಿಚಿತರು ಹಾಗೂ ಎ4 ಕಮಲಾಕರ ಭಟ್ ಸ್ವಾಮೀಜಿ ಆಗಿದ್ದು, ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



