ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ 14ನೇ ಪುಣ್ಯಸ್ಮರಣೆ, ಅಭಿಮಾನಿಗಳಿಂದ ಗೌರವ ಸಮರ್ಪಣೆಸೊರಬ: ‘ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಜೀವನಗಾಥೆ, ರಾಜಕೀಯ ಬದುಕಿನ ಹಾದಿ ಹಾಗೂ ಮುಖ್ಯಮಂತ್ರಿ ಆಗಿ ಅವರ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರದ ಡಿಜಿಟಲ್ ರೂಪವನ್ನು ಶೀಘ್ರ ಇಲ್ಲಿನ ಬಂಗಾರಧಾಮದಲ್ಲಿ ಅಳವಡಿಸಲಾಗುವುದು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಂಗಾರಪ್ಪ ಹಾಗೂ ಶಕುಂತಲಾ ದಂಪತಿಯ ಸಮಾಧಿ ಸ್ಥಳ ಇಲ್ಲಿನ ‘ಬಂಗಾರಧಾಮ’ದಲ್ಲಿ ಶುಕ್ರವಾರ ಬಂಗಾರಪ್ಪ ಅವರ 14ನೇ ವರ್ಷದ ಪುಣ್ಯತಿಥಿಯ ಪೂಜಾ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.’ಸೊರಬದ ಬಂಗಾರಧಾಮಕ್ಕೆ ರಾಜ್ಯ ಸರ್ಕಾರ ಈಗ ಪ್ರವಾಸಿ ಕೇಂದ್ರದ ಸ್ಥಾನಮಾನ ನೀಡಿದೆ. ಹೀಗಾಗಿ ಇಲ್ಲಿಗೆ ನಾಡಿನ ಎಲ್ಲ ಭಾಗದಿಂದಲೂ ಬಂಗಾರಪ್ಪ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಭೇಟಿ ಕೊಡುತ್ತಿದ್ದಾರೆ.
ಮುಖ್ಯಮಂತ್ರಿ ಆಗಿದ್ದಾಗ ಬಂಗಾರಪ್ಪ ಅವರು ಆರಂಭಿಸಿದ ಆಶ್ರಯ, ಅಕ್ಷಯ, ಆರಾಧನಾ, ವಿಶ್ವ ಯೋಜನೆಗಳಿಂದ ಬದುಕು ಕಟ್ಟಿಕೊಂಡವರು. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪಡೆದ ರೈತಾಪಿ ವರ್ಗದವರು ಅಭಿಮಾನದಿಂದ ಬಂಗಾರಪ್ಪ ಅವರ ಸಮಾಧಿ ಸ್ಥಳ ವೀಕ್ಷಣೆಗೆ ಬರುತ್ತಿದ್ದಾರೆ. ಇಲ್ಲಿ ಡಿಜಿಟಲ್ ಸಾಕ್ಷ್ಯಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಬಂಗಾರಪ್ಪ ಅವರ ಬದುಕಿನ ಹಾದಿ ಅವರಿಗೆ ಮನದಟ್ಟಾಗುತ್ತದೆ. ಪ್ರವಾಸಿ ನೆಲೆಯಾಗಿಯೂ ಇದಕ್ಕೆ ಇನ್ನಷ್ಟು ಮೆರುಗು ಬರಲಿದೆ’ ಎಂದರು.
‘ಬಂಗಾರಪ್ಪ ಬರೀ ವ್ಯಕ್ತಿಯಲ್ಲ. ಅವರು ನಾಡಿನ ಎಲ್ಲ ಸಮುದಾಯಗಳ ಬಡವರಿಗೆ ಶಕ್ತಿ ತುಂಬಿದ್ದ ಜನನಾಯಕ. ವ್ಯಕ್ತಿಯಾಗಿ ಅವರು ಇಲ್ಲದಿದ್ದರೂ ಚಿಂತನೆಗಳ ಮೂಲಕ ಜನಮಾನಸದಲ್ಲಿ ಸದಾ ಜೀವಂತವಾಗಿರಲಿದ್ದಾರೆ. ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಹೀಗಾಗಿಯೇ ಬಂಗಾರಧಾಮ ಶೋಷಿತರು ಹಾಗೂ ಬಡವರ ಚೈತ್ರಭೂಮಿಯಾಗಿ ಮಾರ್ಪಟ್ಟಿದೆ’ ಎಂದರು.
ಮಧು ಬಂಗಾರಪ್ಪ ಪತ್ನಿ ಅನಿತಾ, ಪುತ್ರ ಸೂರ್ಯ, ಮಾವನೂ ಆದ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರೊಂದಿಗೆ ಅಪ್ಪ-ಅಮ್ಮನ ಸಮಾಧಿ ಸ್ಥಳದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಬಂಗಾರಧಾಮಕ್ಕೆ ಮುಂಜಾನೆಯೇ ಸೊರಬ ಕ್ಷೇತ್ರ ಮಾತ್ರವಲ್ಲದೆ ಕಲಬುರಗಿ, ಬೆಂಗಳೂರು, ಶಿವಮೊಗ್ಗ, ಸಾಗರದಿಂದಲೂ ಬಂದಿದ್ದ ಬಂಗಾರಪ್ಪ ಕುಟುಂಬದ ಬೆಂಬಲಿಗರು, ಸಮಕಾಲೀನರು ತಮ್ಮ ನಾಯಕನ ಸಮಾಧಿ ಸ್ಥಳಕ್ಕೆ ಹೂ ಅರ್ಪಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣಪತಿ ಹುಲ್ತಿಕೊಪ್ಪ ಕೆ .ಪಿ. ರುದ್ರ ಗೌಡ್ರು ತಬಲಿ ಬಂಗಾರಪ್ಪ ಜಯಶೀಲ ಗೌಡ್ರು ಜಿ. ಡಿ. ಮಂಜುನಾಥ್, ಬ್ಲಾಕ್ ಅಧ್ಯಕ್ಷರಾದ ಅಣ್ಣಪ್ಪ ಹಾಲ್ಘಟ್ಟ ಸದಾ ಗೌಡ್ರು ಚಂದ್ರ ಭೂಪಾಲ್ ಎಂ ಡಿ ಶೇಖರ್ ಚಿಕ್ಕ ಸವಿ ನಾಗರಾಜ್ ಇನ್ನಿತರ ಮುಖಂಡರು ಅಪಾರ ಅಭಿಮಾನಿಗಳು ಹಾಜರಿದ್ದರು.
ಬಂಗಾರಧಾಮದ ಆವರಣದಲ್ಲಿ ಅಡ್ಡಾಡಿ ಅಲ್ಲಿನ ಕಟ್ಟೆಯ ಮೇಲೆ ಕೂತು ಬಂಗಾರಪ್ಪ ಅವರ ಕಾಲದ ನೆನಪುಗಳೊಂದಿಗೆ ಸಂವಾದಿಯಾದರು. ಎಲ್ಲರಿಗೂ ಅಲ್ಲಿಯೇ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶಹನಾಯ್ ವಾದನದ ನಮನ ಕೂಡ ನಡೆಯಿತು.



