ಶಿವಮೊಗ್ಗ | ₹25 ಲಕ್ಷ ಲಂಚ ಬೇಡಿಕೆ ಸೂಡಾ ಅಧ್ಯಕ್ಷ ಸುಂದರೇಶ್ ಆರೋಪ : ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಕೆ. ಬಿ. ಪ್ರಸನ್ನ ಕುಮಾರ್ ಆಗ್ರಹ

ರಾಜಕೀಯ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚಾವತಾರ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.

ಇಂದು ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಅವರ ಆಪ್ತರೊಬ್ಬರು ಪ್ರಾಧಿಕಾರದ ಕಚೇರಿಗೆ ತೆರಳಿ ₹25 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಸ್ವತಃ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಈ ಲಂಚದ ಬೇಡಿಕೆಯ ಹಿಂದೆ ಸಚಿವರ ಪಾತ್ರವಿದೆಯೇ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕಿದೆ.

ಲೋಕಾಯುಕ್ತ ಪೊಲೀಸರು ತಕ್ಷಣ ಸ್ವಯಂಪ್ರೇರಿತ ದೂರು (ಸುಮೋಟೋ) ದಾಖಲಿಸಿಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

“2022ರ ನವೆಂಬರ್‌ ತಿಂಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಮಧು ಬಂಗಾರಪ್ಪ ಅವರು ಜನಾಕ್ರೋಶ ಪಾದಯಾತ್ರೆ ನಡೆಸಿದ್ದರು. ಶರಾವತಿ ಸಂತ್ರಸ್ತರ ಜಾಗದ ಸಮಸ್ಯೆ, ಬಗರ್‌ಹುಕುಂ ರೈತರ ಸಾಗುವಳಿ ಹಕ್ಕು ಸೇರಿದಂತೆ ಹಲವು ಆಶ್ವಾಸನೆಗಳನ್ನು ನೀಡಿ ಜನರಿಂದ ಗೆದ್ದು ಸಚಿವರಾದರು.

ಆದರೆ ಅಧಿಕಾರಕ್ಕೆ ಬಂದು ಮೂರು ಬಜೆಟ್‌ಗಳು ಮುಗಿದರೂ ಜಿಲ್ಲೆಗೆ ಭರವಸೆ ನೀಡಿದ್ದ ಆಡಳಿತ ಭವನ ನಿರ್ಮಾಣಕ್ಕೆ ಒಂದು ರೂಪಾಯಿ ಅನುದಾನ ತರಲು ಸಾಧ್ಯವಾಗಿಲ್ಲ” ಎಂದು ಪ್ರಸನ್ನಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಮತ್ತು ತೆಂಗಿನ ಮರಗಳು ಧರಾಶಾಹಿಯಾಗಿವೆ. ತೀವ್ರ ನಷ್ಟ ಅನುಭವಿಸಿರುವ ಮಲೆನಾಡಿನ ರೈತರಿಗೆ ಸೂಕ್ತ ಪರಿಹಾರ ತಲುಪಿಸುವಲ್ಲಿ ಮತ್ತು ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿಸುವಲ್ಲಿಯೂ ಸಚಿವರಾದ ಮಧು ಬಂಗಾರಪ್ಪ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Author