ಶಿವಮೊಗ್ಗ | ಕಸ್ತೂರಿರಂಗನ್ ವರದಿ ಜಾರಿ ಅಧಿಸೂಚನೆ ವಿರೋಧಿಸಿ ಹೊಸನಗರದಲ್ಲಿ ನಾಳೆ ಪಾದಯಾತ್ರೆ, ಬಹಿರಂಗ ಸಭೆ : ಆರ್.ಎಂ.ಮಂಜುನಾಥಗೌಡ

ರಾಜಕೀಯ

ಶಿವಮೊಗ್ಗ,ರೈತರು, ಕೃಷಿ ಕಾರ್ಮಿಕರ ಬದುಕನ್ನೇ ದುರ್ಬರಗೊಳಿಸುವ ಕಸ್ತೂರಿರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ವಿರೋಧಿಸಿ ಪಾದಯಾತ್ರೆ ಮತ್ತು ಬಹಿರಂಗ ಸಭೆಯನ್ನು ಹೊಸನಗರದಲ್ಲಿ ನಾಳೆ 30ರಂದು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರೆ ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆಯ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಈ ನಿಮಿತ್ತ ಪಾದಯಾತ್ರೆ ಬೆಳಿಗ್ಗೆ 9 ಗಂಟೆಗೆ ಸಿದ್ದಿವಿನಾಯಕ ದೇವಸ್ಥಾನ, ಕಾರಗಡಿಯಿಂದ ಆರಂಭವಾಗಿ ಹೊಸನಗರ ತಲುಪಿ ನಂತರ ಬಹಿರಂಗ ಸಭೆ ನಡೆಲಾಗುವುದು ಎಂದರು.

7ನೇ ಕರಡು ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯದ 20,668 ಚದರ ಕಿ.ಮೀ ಮಲೆನಾಡು ಪ್ರದೇಶದ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು.ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ ತಾಲ್ಲೂಕಿನ 473 ಗ್ರಾಮಗಳನ್ನು ಸೇರಿಸಲಾಗಿದೆ. ಈ ಅಧಿಸೂಚನೆ ಜಾರಿಗೊಂಡರೆ ಸೂಕ್ಷ್ಮ ಕಠೋರ ಕಾಯ್ದೆಗಳಿಂದ ಗ್ರಾಮ ಜೀವನ ಅಸ್ತವ್ಯಸ್ತವಾಗುವ ಆತಂಕ ಉಂಟಾಗಿದೆ ಎಂದರು.

ಗ್ರಾಮಗಳ ವಸತಿ ಪ್ರದೇಶ, ಕೃಷಿಭೂಮಿ, ಪಟ್ಟಾಭೂಮಿ, ನೀರಿನ ಮೂಲ, ಗೋಮಾಳ, ಗ್ರಾಮದ ರಸ್ತೆ ಮತ್ತಿತರ ಮೂಲಸೌಕರ್ಯಗಳನ್ನು ಸೂಕ್ಷ್ಮವಲಯದಿಂದ ಹೊರಗಿಡದೇ, ಇಡೀ ಗ್ರಾಮವನ್ನೇ ಸೂಕ್ಷ್ಮವಲಯವೆಂದು ಘೋಷಿಸಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.ಗ್ರಾಮಸಭೆಯಲ್ಲಿ ಚರ್ಚಿಸದೇ, ಗ್ರಾಮದ ಜನರ ವಿಶ್ವಾಸವನ್ನು ಅಲಕ್ಷಿಸಿ, ಅಧಿಸೂಚನೆ ಹೊರಡಿಸಿರುವುದು ಗ್ರಾಮವಾಸಿಗಳ ಆತಂಕವಾಗಿದೆ. ಗ್ರಾಮದ ಜನರೇ ಸೂಕ್ಷ್ಮವಲಯದ ಸರಹದ್ದುಗಳನ್ನು ಗುರುತಿಸಬೇಕು ಮತ್ತು ಸರ್ಕಾರ ಅದನ್ನು ಒಪ್ಪಬೇಕುಎಂದು ಆಗ್ರಹಿಸಿದರು.

ಸೂಕ್ಷ್ಮಪ್ರದೇಶವೆಂದು ಗುರುತಿಸಲ್ಪಡುವ ಜಾಗಗಳಲ್ಲಿ ಹತ್ತಾರು ದಶಕಗಳಿಂದ ಕೃಷಿ ಮಾಡುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ವಾಸವಿರುವ ಮನೆಗಳಿಗೂ ದಾಖಲೆಗಳನ್ನು ನೀಡಲಾಗಿಲ್ಲ. ಅರ್ಜಿ ನಮೂನೆ 50,53,57 ಮತ್ತು ಮನೆಗಳಿಗಾಗಿ 94C ರಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾದಿರುವ ಕುಟುಂಬಗಳು ಸೂಕ್ಷ್ಮ ಪ್ರದೇಶ ಘೋಷಣೆಯಿಂದ ತಾವು ವಾಸವಿರುವ ಮತ್ತು ಕೃಷಿ ಮಾಡುತ್ತಿರುವ ಜಾಗದ ಮೇಲಿನ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರು.

Author