ಶಿವಮೊಗ್ಗ | ಸಾಲ ಕೊಡೊವುದಾಗಿ ನಕಲಿ ಬ್ಯಾಂಕ್ ಮ್ಯಾನೇಜರ್ ಮಾತು ನಂಬಿದ ಹಿರಿಯ ಪೊಲೀಸ್ ಅಧಿಕಾರಿಗೆ ವಂಚನೆ

ಕ್ರೈಂ

ಶಿವಮೊಗ್ಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ 25 ಲಕ್ಷ ಲೋನ್ ಕೊಡಿಸುವುದಾಗಿ ನಂಬಿಸಿದ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ

ದೂರುದಾರರ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದನು. ತಾನು ಕೇಂದ್ರ ಸರ್ಕಾರದ ಮುದ್ರಾ ಲೋನ್ ಯೋಜನೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ ವಂಚಕ, ಮುದ್ರಾ ಯೋಜನೆಯಡಿ ನಿಮಗೆ 25,00,000 ರೂಪಾಯಿ ಸಾಲ ಹಾಗೂ ಅದರ ಜೊತೆಗೆ 5,00,000 ರೂಪಾಯಿ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿದ್ದಾನೆ.

ಅಪರಿಚಿತನ ಮಾತು ನಂಬಿದ ಹಿರಿಯ ಅಧಿಕಾರಿಯಿಂದ ಲೋನ್ ಪ್ರಕ್ರಿಯೆಯ ಹೆಸರಿನಲ್ಲಿ ವಿವಿಧ ದಾಖಲೆಗಳನ್ನು ಪಡೆದುಕೊಂಡಿದ್ದ ವಂಚಕರು, ನಂತರ ಹಂತ-ಹಂತವಾಗಿ ಒಟ್ಟು 3,04,000 ರೂಪಾಯಿ ಹಣವನ್ನು ಆನ್‌ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ಸಂದಾಯವಾದ ಬಳಿಕ ಲೋನ್ ನೀಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಕೇಂದ್ರ ಸರ್ಕಾರದ ಮುದ್ರಾ ಮ್ಯಾನೇಜರ್ ಎಂದು ನಟಿಸಿ, ನಕಲಿ ದಾಖಲಾತಿ ಸೃಷ್ಟಿಸಿ ತನ್ನ ಬ್ಯಾಂಕ್ ಖಾತೆಯಿಂದ 3,04,000 ರೂಪಾಯಿ ಹಣವನ್ನು ದೋಚಿದ ಸೈಬರ್ ವಂಚಕರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಂತೆ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Author