ಶಿವಮೊಗ್ಗ | ಗಾಂಧೀಜಿಯವರನ್ನು ಮರೆತರೆ, ದೇಶವನ್ನು ಮರೆತಂತೆ | ಎಂ.ಎನ್ ಸುಂದರರಾಜ್

ಶಿವಮೊಗ್ಗ

ಶಿವಮೊಗ್ಗ,ರಾಷ್ಟ್ರಪಿತ ಗಾಂಧೀಜಿಯವರು ನಮ್ಮ ದೇಶಕ್ಕೆ ಕೇವಲ ಸ್ವಾತಂತ್ರ ತಂದುಕೊಡಲು ಕಾರಣರಾಗಿಲ್ಲ ಬದಲಾಗಿ ಅಹಿಂಸೆ ಸತ್ಯ ಇವುಗಳನ್ನು ಪರಿಪಾಲನೆ ಮಾಡಬೇಕೆಂಬ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಅವರು ದೇಶಕ್ಕಾಗಿ ಅಹಿಂಸಾತ್ಮಕವಾದ ಚಳುವಳಿಯ ಮೂಲಕ ಬ್ರಿಟಿಷರ ಆಡಳಿತವನ್ನು ವಿರೋಧಿಸಿದ ವ್ಯಕ್ತಿಯಾಗಿದ್ದರು. ಇಂದು ಅವರ ಆದರ್ಶವನ್ನು ಹಾಕಿಕೊಟ್ಟ ಮಾರ್ಗವನ್ನು ನಾವು ಮರೆತರೆ ನಮ್ಮ ದೇಶದ ಪರಂಪರೆಯನ್ನೇ ಮರೆತಂತೆ ಎಂದು ಸಾಹಿತಿ ಎಂ.ಎನ್.ಸುಂದರರಾಜ್ ತಿಳಿಸಿದ್ದಾರೆ.

ಗಾಂಧೀಜಿಯವರ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಇಂದಿನ ಪ್ರಕ್ಶುದ್ಧ ವಾತಾವರಣದಲ್ಲಿ ದೇಶ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ಶಾಂತಿಯುತ ಮಾರ್ಗದಲ್ಲಿ ಸತ್ಯಾಗ್ರಹ ಮತ್ತು ಚಳುವಳಿಯ ಮೂಲಕ ನಡೆಸುವ ಹೋರಾಟ ಪರಸ್ಪರ ದ್ವೇಷವನ್ನು ಹುಟ್ಟು ಹಾಕದೆ ಸೌಹಾರ್ದ ವಾತಾವರಣವನ್ನು ನಿರ್ಮಿಸುತ್ತದೆ ಎಂಬುದನ್ನು ಗಾಂಧೀಜಿಯವರ ಜೀವನದಲ್ಲಿ ನೋಡಬಹುದಾಗಿದೆ.

ಅವರ ಆದರ್ಶಗಳು ಸರಳವಾಗಿದ್ದು ಅದನ್ನು ಹಿಂದಿನ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಕರೆ ನೀಡಿದರು.

ಅವರು ಹೊಸನಗರ ತಾಲೂಕು ಹಲಗೆರಿ ಮಂಡ್ರಿ ಶ್ರೀ ಚನ್ನಮ್ಮ ಪ್ರೌಢಶಾಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಮತ್ತು ತಾಲೂಕು ಸರ್ವೋದಯ ಮಂಡಲ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ ರವರು ಗಾಂಧೀಜಿಯವರು ತಮ್ಮ ವಿದ್ಯಾಭಾಸವನ್ನು ಕಡೆಗಣಿಸದೆ ಬ್ಯಾರಿಸ್ಟರ್ ಆಗಿದನ್ನು ನೆನಪಿಸುತ್ತ ಜೀವನದಲ್ಲಿ ನೀವು ಏನಾದರೂ ಆಗಿ ಆದರೆ ಮೊದಲು ವಿದ್ಯಾವಂತರಾಗಿ ಎಂದು ವಿದ್ಯೆಗೆ ಇರುವ ಮಹತ್ವವನ್ನು ಸಾರಿ ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಶಿವಣ್ಣನವರು ಮಾತನಾಡಿ ತಮ್ಮ ಶಾಲೆಯಲ್ಲಿ ಹೊಸನಗರ ತಾಲೂಕು ಸರ್ವೋದಯ ಮಂಡಳಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ತುಂಬಾ ವಿಶಿಷ್ಟವಾದದ್ದು ಇಂತಹ ಕಾರ್ಯಕ್ರಮಗಳು ಆಗಾಗ ಗ್ರಾಮಾಂತರ ಪ್ರದೇಶಗಳಲ್ಲಿ ನಡೆದರೆ ಅದು ಮಕ್ಕಳಿಗೆ ಸ್ಪೂರ್ತಿ ನೀಡುತ್ತದೆ ಮತ್ತು ದೇಶ ಪ್ರೇಮವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರುಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೊಸನಗರ ತಾಲೂಕು ಸರ್ವೋದಯ ಮಂಡಲದ ಅಧ್ಯಕ್ಷ ವಿಶ್ವೇಶ್ವರಯ್ಯನವರು ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ಮಹಾತ್ಮರ ಬಗ್ಗೆ ಹೆಮ್ಮೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪುಸ್ತಕಗಳನ್ನು ನೀಡುವುದರ ಮೂಲಕ ಪ್ರೋತ್ಸಾಹ ನೀಡಲಾಯಿತು.

ಶಿಕ್ಷಕ ಪಾಲಾಕ್ಷಪ್ಪನವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಆರತಿ ತಿವಾರಿ ಅವರು ಗಾಂಧೀಜಿಯ ಕುರಿತು ಕವನ ವಾಚನ ಮಾಡಿದರು. ಈ ಸಮಾರಂಭದಲ್ಲಿ ಶಿಕ್ಷಕಿಯರಾದ ಕುಮಾರಿ ಅರ್ಪಿತ. ಪಿ, ದೀಪಿಕಾ ಡಿ ಜಿ ಎಲ್ಲ ಶಿಕ್ಷಕರು ಹಾಜರಿದ್ದರು.

Author