ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ರಂಭಾಪುರಿ ಜಗದ್ಗುರುಗಳು

ಶಿವಮೊಗ್ಗ

ಶಿವಮೊಗ್ಗ,ಮನುಷ್ಯ ಜೀವನ ಪವಿತ್ರ ಪಾವನ. ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದೆಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ತಾಲೂಕಿನ ಸೂಗೂರು ಮೃಡಬಸವೇಶ್ವರಸ್ವಾಮಿ ದೇವಸ್ಥಾನದ ಮಂಡಲ ಪೂಜಾ ನಿಮಿತ್ಯವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಜೀವನ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಮನುಷ್ಯ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾನೆ. ಆದರೆ ದೊಡ್ಡ ಮನುಷ್ಯನಾಗಿ ಬಾಳಲು ಯತ್ನಿಸುತ್ತಿಲ್ಲ. ಸಂಪತ್ತು ಬಂದಾಗ ಸ್ನೇಹ ಹೆಂಡತಿ ಬಂದಾಗ ಹೆತ್ತವರನ್ನು ಮರೆಯಬಾರದು.

ಸಮಾಜದಲ್ಲಿ ಗೌರವ ಘನತೆ ಪ್ರಾಪ್ತವಾದ ದಿನಗಳಲ್ಲಿ ನಡೆದು ಬಂದ ದಾರಿಯನ್ನು ಮರೆಯಬಾರದು. ವೀರಶೈವ ಧರ್ಮದಲ್ಲಿ ಸಂಸ್ಕಾರ ಸಂಸ್ಕೃತಿಗೆ ಬಹಳಷ್ಟು ಮಹತ್ವವನ್ನು ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ವಿಚಾರ ಧಾರೆಗಳು ಸಕಲರಿಗೂ ದಾರಿದೀಪ. ಸೂಗೂರಿನಲ್ಲಿ ಭವ್ಯ ಸುಂದರ ಶ್ರೀ ಮೃಡಬಸವೇಶ್ವರಸ್ವಾಮಿ ದೇವಸ್ಥಾನ ನಿರ್ಮಿಸಿ ಇಂದು ಮಂಡಲೋತ್ಸವ ಆಚರಿಸುತ್ತಿರುವುದು ತಮ್ಮೆಲ್ಲರಲ್ಲಿರುವ ಧರ್ಮ ನಿಷ್ಠೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ನೇತೃತ್ವ ವಹಿಸಿದ ಮಳಲಿ ಮಠದ ಡಾ||ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶಿವ ಎಂಬ ಶಬ್ದ ಭವಾಬ್ಧಿ ದಾಟಿಸುವ ಹರಿಗೋಲು. ಗುರುವಿನ ಮೂಲಕ ಅರಿವು ಪಡೆದು ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣಕುಮಾರ್ ಮಾತನಾಡಿ, ಮನುಷ್ಯನಲ್ಲಿ ಏನೆಲ್ಲ ಸಂಪತ್ತು ಇದ್ದರೂ ಮಾನಸಿಕವಾಗಿ ಶಾಂತಿಯಿಲ್ಲ. ಸಮೃದ್ಧ ಶಾಂತಿಯ ಬದುಕಿಗೆ ಧರ್ಮವೊಂದೇ ಆಶಾಕಿರಣವೆಂದರು. ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ ಆಧುನಿಕ ಕಾಲದಲ್ಲಿ ನಾವಿದ್ದರೂ ನಮ್ಮ ಆದರ್ಶ ಪರಂಪರೆ ಸಂಸ್ಕೃತಿ ಮರೆಯಬಾರದು ಎಂದರು.

ಶಿವಮೊಗ್ಗ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರೊ. ಹಾ.ಮಾ.ನಾಗರಾಜ್ ಮಾತನಾಡಿದರು. ಶಿವಕುಮಾರ್ ಸ್ವಾಗತಿಸಿದರು. ನವೀನ ನಿರೂಪಿಸಿದರು.ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು.

Author