ಶಿವಮೊಗ್ಗ | ಬೇಳೂರು ಗೋಪಾಲಕೃಷ್ಣರಿಗೆ ಸಚಿವ ಸ್ಥಾನ ನೀಡಿ ; ಸಾಗರ ಕಾಂಗ್ರೆಸ್‌ ಮುಖಂಡರ ಒಕ್ಕೊರಲ ಒತ್ತಾಯ

ರಾಜಕೀಯ

ಶಿವಮೊಗ್ಗ, ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಸಾಗರ ಮತ್ತು ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸ್ಥಾನ ಕಲ್ಪಿಸಬೇಕೆಂದು ಹಿರಿಯ ಸಮಾಜವಾದಿ ಮುಖಂಡರೂ ಆದ ಸಾಗರದ ಕಾಂಗ್ರೆಸ್‌ ನಾಯಕ ಬಿ.ಅರ್.ಜಯಂತ್‌ ಹೇಳಿದರು.

ಶಿವಮೊಗ್ಗ ಪತ್ರಿಕಾ ಭವನದಲ್ಲಿ ಸೋಮವಾರ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಅವರು, ಯುವ ನಾಯಕರಾಗಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಸಾಗರ ಕಾಂಗ್ರೆಸ್‌ ಪರವಾಗಿ ಮನವಿ ಮಾಡುತ್ತೇವೆ ಎಂದರು.

ಬೇಳೂರು ಗೋಪಾಲಕೃಷ್ಣ ಅವರು ಉತ್ತಮ ಸಂಘಟಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಲವರ್ದನೆಯಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪ ಅವರ ಶಿಷ್ಯರಾಗಿರುವ ಅವರು, ಯುವಜನರ ನೆಚ್ಚಿನ ನಾಯಕರಾಗಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡಿದರೆ, ಶಿವಮೊಗ್ಗ ಜಿಲ್ಲೆಯ ಎಲ್ಲಾ ನಾಯಕರುಗಳೂ ಸೇರಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಹೈಕಮಾಂಡ್‌ ನಾಯಕರು ಗೋಪಾಲಕೃಷ್ಣ ಅವರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಸಾಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲಸೆ ಚಂದ್ರಪ್ಪ ಅವರು ಮಾತನಾಡಿ, ಮಧುಬಂಗಾರಪ್ಪ ಅವರೂ ನಮ್ಮ ನಾಯಕರು. ಮೂರು ವರ್ಷ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈಗ ಬೇಳೂರು ಗೋಪಾಲಕೃಷ್ಣ ಅವರಿಗೆ ಅವಕಾಶ ನೀಡಬೇಕೆಂಬುದು ನಮ್ಮ ಮನವಿಯಾಗಿದೆ. ಬೇಳೂರು ಯುವಜನರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಅವರಿಂದ ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತದೆ. ಮೂರು ಬಾರಿ ಶಾಸಕರಾಗಿರುವ ಅವರನ್ನು ಗುರುತಿಸಲು ಇದೊಂದು ಅವಕಾಶವಾಗಿದೆ. ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಿರುವ ಕೆಲಸಗಳು ಹೆಚ್ಚಿವೆ. ಅವರಿಗೆ ಅವಕಾಶ ನೀಡಬೇಕು. ಈ ಸಂಬಂಧ ಪಕ್ಷದ ನಾಯಕರನ್ನು ತಾಲೂಕು ಕಾಂಗ್ರೆಸ್‌ನಿಂದ ಭೇಟಿ ಮಾಡಿ ಮನವಿ ಮಾಡುತ್ತೇವೆ.

ಜೂ.11 ರಂದು ಸಾಗರದ ಮಾರಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂದು ಪಕ್ಷದ ನಾಯಕರ ಗಮನ ಸೆಳೆಯಲು ಹಕ್ಕೊತ್ತಾಯದ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

ಹೊಸನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಮೌಳಿ ಅವರು ಮಾತನಾಡಿ, ಹಿಂದುಳಿದ ಹೊಸನಗರ ಮತ್ತು ಸಾಗರ ಪ್ರತಿನಿಧಿಸುವ ಗೋಪಾಲಕೃಷ್ಣ ಅವರು ಯುವಜನರ ಕಣ್ಮಣಿಯಿದ್ದು, ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಈ ಕಾರಣದಿಂದ ಅವರಿಗೆ ಡಿಕೆಶಿ ಅವರ ಸಂಪುಟದಲ್ಲಿ ಸ್ಥಾನ ನೀಡಬೇಕು. ಇದರಿಂದ ಪಕ್ಷ ಮತ್ತು ಸರಕಾರಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.

ಆಪ್ಸ್‌ಕೋಸ್‌ ಅಧ್ಯಕ್ಷ ಇಂದೂಧರ ಗೌಡ ಅವರು ಮಾತನಾಡಿ, ಸಾಗರ ರಾಜಕೀಯವಾಗಿ ಸೂಕ್ಷ್ಮವಾದ ಕ್ಷೇತ್ರವಾಗಿದ್ದು, ಬೇಳೂರು ಗೋಪಾಲಕೃಷ್ಣ ಅವರಂತಹ ಯುವನಾಯಕರಿಗೆ ಸಚಿವ ಸ್ಥಾನ ನೀಡಬೇಕಿದೆ. ಹಿನ್ನೀರು ಸಂತ್ರಸ್ಥ ಗ್ರಾಮವಾದ ಬೇಸೂರಿನಲ್ಲಿ ಅಣುಸ್ಥಾವರ ನಿರ್ಮಾಣದ ಪ್ರಸ್ತಾಪವಿದೆ. ಈ ಯೋಜನೆ ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟ ಮಾಡಲೂ ಸಿದ್ದ ಎಂಬ ಬದ್ದತೆಯನ್ನು ಗೋಪಾಲಕೃಷ್ಣ ಪ್ರದರ್ಶಿಸಿದ್ದಾರೆ. ಮೂರು ಬಾರಿ ಆಯ್ಕೆಯಾಗಿರುವ ಅವರನ್ನು ಈ ಬಾರಿ ಸಚಿವರಾಗಿ ಮಾಡಿದರೆ ಕ್ಷೇತ್ರ ಮತ್ತು ಜಿಲ್ಲೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಈಶ್ವರಪ್ಪಗೌಡ,ಮಧು, ಅನಿತಾ ಕುಮಾರ, ಸೋಮಶೇಖರ್‌ ಲ್ಯಾವಿಗೆರೆ, ಆನಂದ, ಜಾಕೀರ್‌, ಗಿರೀಶ್‌ ಕೋವಿ, ಜಾಕಿ ಗಣೇಶ್‌, ಏರಗಿ ಉಮೇಶ್‌, ಮಂಡಗಳಲೆ ಗಣಪತಿ, ಬಂಡಿ ನೇಮಪ್ಪ, ಪ್ರಭಾವತಿ ಚಂದ್ರಕಾಂತ್‌ ಸೇರಿದಂತೆ ಅನೇಕ ಮುಂಡರು ಭಾಗವಹಿಸಿದ್ದರು.

  • ಬಿಜೆಪಿ ಶಕ್ತಿ ಕೇಂದ್ರವಾದ ಶಿವಮೊಗ್ಗದಲ್ಲಿ ಪಕ್ಷ ಬೆಳವಣಿಗೆ ದೃಷ್ಠಿಯಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವುದು ಉತ್ತಮವಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಯುವಜನರಲ್ಲಿ ಹೊಸ ಚೈತನ್ಯ ಬಂದಂತಾಗುತ್ತದೆ. ಉತ್ತಮ ಕೆಲಸಗಾರರಾದ ಬೇಳೂರು ಸಾಮಾನ್ಯ ಜನರ ಪ್ರತಿನಿಧಿಯಂತೆ ಕೆಲಸ ಮಾಡುತ್ತಾರೆ. ಎಲ್ಲರೊಂದಿಗೆ ಬೆರೆಯುವ ಅವರು ಜನಪರವಾದ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ ನಾಯಕರು, ಮುಖ್ಯಮಂತ್ರಿ ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು.
  • ಚಿದಂಬರ ಹೆಚ್.ಪಿ. ಕಾಂಗ್ರೆಸ್‌ ಮುಖಂಡರು, ಹೊಸನಗರ.
  • ಶಿಕ್ಷಣ ಸಚಿವರಾಗಿ ಮಧುಬಂಗಾರಪ್ಪ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷದ ನಾಯಕರಾಗಿದ್ದು, ಮೂರು ವರ್ಷ ಅವರಿಗೆ ಅವಕಾಶ ನೀಡಲಾಗಿದೆ. ರಾಜಕೀಯವಾಗಿ ಪ್ರಬಲವಾಗಿರುವ ಶಿವಮೊಗ್ಗ ಜಿಲ್ಲೆಯ ಇಬ್ಬರು ನಾಯಕರಿಗೂ ಸಚಿವ ಸ್ಥಾನ ನೀಡಿದರೆ ತಪ್ಪೇನು ಆಗುವುದಿಲ್ಲ.
  • ಬಿ.ಆರ್.ಜಯಂತ್‌, ಹಿರಿಯ ಕಾಂಗ್ರೆಸ್‌ ಮುಖಂಡರು
  • ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಶಾಸಕರು ನಷ್ಟದಲ್ಲಿದ್ದ ನಿಗಮವನ್ನು ಲಾಭಕ್ಕೆ ತಂದಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಅವರಿಗೆ ಕಷ್ಟದ ಅರಿವಿದೆ. ಕಷ್ಟ ಹೇಳಿಕೊಂಡು ಬರುವ ಜನರಿಗೆ ಸ್ಪಂದಿಸುವ ಗುಣವಿದೆ. ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಎಲ್ಲ ವರ್ಗಗಳಿಗೆ ನ್ಯಾಯ ಕೊಟ್ಟಂತಾಗುತ್ತದೆ. ಪಕ್ಷದ ನಾಯಕರು ನಮ್ಮ ಮನವಿ ಪುರಸ್ಕರಿಸಬೇಕು.
  • ಅನಿತಾ ಕುಮಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷರು.‌
  • ಬೇಳೂರು ಅವರು ಬಡಜನರ ಪ್ರತಿನಿಧಿಯಾಗಿದ್ದಾರೆ. ನೊಂದ ಜನರ ಕಷ್ಟಗಳಿಗೆ ಸ್ಪಂದಿಸುವ ಅವರು, ಯಾವುದೇ ಸಂದರ್ಭದಲ್ಲೂ ಜನ ಬಂದರೂ ಅವರ ಸಮಸ್ಯೆ ನೀಗಿಸುವ ಕೆಲಸ ಮಾಡುತ್ತಾರೆ. ಶಾಸಕರಾಗಿದ್ದಾಗ ಮತ್ತು ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಜನರ ನೋವುಗಳಿಗೆ ಧ್ವನಿಯಾಗಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡುವುದರಿಂದ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಶಕ್ತಿ ಹೆಚ್ಚಾಗುತ್ತದೆ. ಬಗರ್‌ ಹುಕುಂ, ಶರಾವತಿ ಸಂತ್ರಸ್ತರು, ಅರಣ್ಯ ಸಾಗುವಳಿದಾರರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪಕ್ಷದ ವರಿಷ್ಟರು ಬೇಳೂರು ಅವರಿಗೆ ಆದ್ಯತೆ ನೀಡಬೇಕು.
  • ಸೋಮಶೇಖರ್‌ ಲ್ಯಾವಿಗೆರೆ, ಕಾಂಗ್ರೆಸ್‌ ಮುಖಂಡರು.

Author