ಶಿವಮೊಗ್ಗ,ದಿನಾಂಕ ಜು.5 ರಿಂದ 11 ಶ್ರೀ ಶ್ರೀಧರ ಸಪ್ತಾಹ ಮಾಲಿಕೆ ವಿಶೇಷ ಪ್ರವಚನ.
ಅಧಿಕ ಮಾಸದ ಪ್ರಯುಕ್ತ ಗುರು ಭಕ್ತರಿಗೆ ರಸದೌತಣ ನೀಡುವ ಸದುದ್ದೇಶದಿಂದ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಇದೇ ತಿಂಗಳ ದಿನಾಂಕ 5 ರಿಂದ 11 ರ ವರೆಗೆ ಪ್ರತಿದಿನ ಸಂಜೆ 6.30 ರಿಂದ 8 ರ ತನಕ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಜೀವನದ ಅಪರೂಪದ ಸನ್ನಿವೇಶಗಳನ್ನು ಒಳಗೊಂಡ ಸಮಗ್ರ ಚರಿತ್ರೆಯ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದ ಶ್ರೀ ಶ್ರೀಧರ ಸೇವಾ ಸಮಿತಿ, ಅರ್ಚಕ ವೃಂದದ ವತಿಯಿಂದ ನಡೆಯಲು ಉದ್ದೇಶಿಸಿರುವ ಈ ವಿಶೇಷ ಕಾರ್ಯಕ್ರಮವನ್ನು ತತ್ವ ಶಂಕರ ಖ್ಯಾತಿಯ ಹೊಸಪೇಟೆಯ ಚಿಂತಾಮಣಿ ಮಠದ 31 ನೆಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಪ್ರವಚನ ನೀಡಲಿದ್ದಾರೆ.

ಪವಾಡ ಪುರುಷರು, ಸಂತರು, ಮಹಾತ್ಮರೂ, ಶ್ರೇಷ್ಠ ಗುರುಗಳು, ಅವಧೂತರು , ಎಂಬಿತ್ಯಾದಿ ಬಿರುದು ಹೊಂದಿರುವ ಶ್ರೀ ಶ್ರೀಧರ ಸ್ವಾಮಿಗಳವರ ಜೀವನ, ಸಾಧನೆ, ಸಾರ್ಥಕತೆಯ ವಿಚಾರವನ್ನು ಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತೀ ಸ್ವಾಮಿಗಳ ಮುಖಾಂತರವೇ ಸಪ್ತಾಹ ರೂಪದಲ್ಲಿ ಒಂದು ವಾರದ ಕಾಲ ಕೇಳುವ ವಿಶೇಷ ಅವಕಾಶ ಇದಾಗಿದೆ.
ಶಿವಮೊಗ್ಗದ ಹಲವು ಸಂಘ ಸಂಸ್ಥೆಗಳು ಹಾಗೂ ಗುರು ಭಕ್ತರು, ಸಂಗೀತ ಶಾಲೆಗಳು ಎಲ್ಲರೂ ಶ್ರದ್ದೆಯಿಂದ ಕೈ ಜೋಡಿಸಿ ನಡೆಸುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಗುರು ಭಕ್ತರು, ಆಸಕ್ತ ಸಾರ್ವಜನಿಕರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳ ಚರಿತ್ರೆ ಶ್ರವಣ ಮಾಡುವ ಮೂಲಕ ಅಧಿಕ ಪುಣ್ಯ ಗಳಿಸುವಂತೆ ಆಗಲಿ ಎಂದು ಸಮಿತಿಯ ವತಿಯಿಂದ ಪ್ರಾರ್ಥಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಜಿ ಅರುಣ್ ಕುಮಾರ್ – 98444-44820 ಇವರಲ್ಲಿ ಸಂಪರ್ಕಿಸಬಹುದು.

