ಶಿವಮೊಗ್ಗ | ಓಲೈಕೆಗೋಸ್ಕರ ಮಕ್ಕಳ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ,ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ : ಸಂಸದ BYR ಕಿಡಿ

ರಾಜಕೀಯ

ಶಿವಮೊಗ್ಗ,ಶಾಲಾ ಆವರಣದಲ್ಲಿ ಸಮಾನತೆ ಬಿತ್ತುವ ಸಮವಸ್ತ್ರ ನಿಯಮ ಸಡಿಲಗೊಳಿಸಿ, ತನ್ನ ಓಟ್ ಬ್ಯಾಂಕ್ ಓಲೈಕೆಗಾಗಿ ಹಿಜಾಬ್‌ಗೆ ಹಠಾತ್ ಅನುಮತಿ ನೀಡಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಶಿವಮೊಗ್ಗ ಸಂಸದರದ ಬಿ. ವೈ. ರಾಘವೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಮನಸ್ಸಿನಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುವ ಬದಲು, ಕೇವಲ ತನ್ನ ತುಷ್ಟೀಕರಣ ರಾಜಕೀಯಕ್ಕೆ ಅನುಕೂಲವಾಗಲಿ ಎಂದು ಶಾಲಾ ಆವರಣಗಳನ್ನೂ ಕೋಮು ಧ್ರುವೀಕರಣದ ಕೇಂದ್ರವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮುಂದಾಗಿದೆ.

ಇದು ವ್ಯವಸ್ಥೆಯನ್ನು ಸುಧಾರಿಸುವ ಬದಲಿಗೆ, ಶಾಂತವಾಗಿರುವ ಶೈಕ್ಷಣಿಕ ವಾತಾವರಣವನ್ನು ಕುಲಗೆಡಿಸುತ್ತಿರುವ ಅಪ್ಪಟ ಶಿಕ್ಷಣ ವಿರೋಧಿ ನಿರ್ಧಾರವಾಗಿದೆ. ಇದಲ್ಲದೆ, ಈ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಕಾಂಗ್ರೆಸ್ ಸರ್ಕಾರ, ಶಾಲಾ ಮಕ್ಕಳಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವ ಆದೇಶ ಹೊರಡಿಸಿರುವುದು ಸರಿಯಲ್ಲ. ಈಗಾಗಲೇ ಹಲವು ಉಚ್ಚ ನ್ಯಾಯಾಲಯಗಳು ಮಕ್ಕಳ ವೈಯಕ್ತಿಕತೆಗಿಂತಲೂ ಶೈಕ್ಷಣಿಕ ಸಂಸ್ಥೆಯ ಶಿಸ್ತು ಹಾಗೂ ಸಮವಸ್ತ್ರ ನಿಯಮವೇ ಮುಖ್ಯ ಎನ್ನುವ ರೀತಿಯಲ್ಲಿ ಸ್ಪಷ್ಟ ತೀರ್ಪು ನೀಡಿವೆ.

ಇಷ್ಟಿದ್ದರೂ ಕೇವಲ ತನ್ನ ಓಟ್ ಬ್ಯಾಂಕ್ ತುಷ್ಟೀಕರಣ ಹಾಗೂ ಓಲೈಕೆ ರಾಜಕೀಯಕ್ಕಾಗಿ ಅಮಾಯಕ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಇನ್ನಾದರೂ ರಾಜ್ಯ ಸರ್ಕಾರ ಈ ವಿವಾದಾತ್ಮಕ ಆದೇಶವನ್ನು ತಕ್ಷಣ ಹಿಂಪಡೆಯಲಿ, ಇಲ್ಲದಿದ್ದರೆ ಮುಂದೆ ಶಾಲಾ-ಕಾಲೇಜುಗಳಲ್ಲಿ ಉದ್ಭವಿಸಬಹುದಾದ ಅಹಿತಕರ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

Author