ಶಿವಮೊಗ್ಗ,ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರನ್ನು ಸೈಬರ್ ವಂಚಕರು ಗುರಿಯಾಗಿಸಿಕೊಂಡಿದ್ದಾರೆ.
ಶಿವಮೊಗ್ಗದ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪ ವಿಭಾಗದಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿತ್ತು. ತಾನು ಬೆಂಗಳೂರಿನ ಲೋಕಾಯುಕ್ತ ಪ್ರಧಾನ ಕಚೇರಿಯ ಅಧಿಕಾರಿ ದಯಾನಂದ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ನಿಮ್ಮ ಮೇಲೆ ಭ್ರಷ್ಟಾಚಾರದ ಎಫ್‌ಐಆರ್ ದಾಖಲಾಗಿದೆ.
ಕೇಸನ್ನು ಬಿ ರಿಪೋರ್ಟ್ ಮಾಡಬೇಕೆಂದರೆ ಆನ್‌ಲೈನ್ ಮೂಲಕ ಹಣ ನೀಡಲು ಸಿದ್ಧರಿರಿ ಎಂದು ಬೇಡಿಕೆ ಇಟ್ಟಿದ್ದನು. ಇದರಿಂದ ಎಚ್ಚೆತ್ತುಕೊಂಡ ದೂರುದಾರರು, ತಮ್ಮ ಬಳಿ ಯಾವುದೇ ಆನ್‌ಲೈನ್ ಪಾವತಿ ಆಪ್‌ಗಳಿಲ್ಲ ಎಂದು ಹೇಳಿ, ಖುದ್ದಾಗಿ ಕಚೇರಿಯಲ್ಲೇ ಭೇಟಿಯಾಗೋಣ ಎಂದಿದ್ದಾರೆ.
ತಕ್ಷಣವೇ ಗಾಬರಿಗೊಂಡ ವಂಚಕ ವಾಟ್ಸಾಪ್ ಕರೆ ಕಟ್ ಮಾಡಿದ್ದಾನೆ. ಅನುಮಾನಗೊಂಡ ಅಧಿಕಾರಿ ಕೂಡಲೇ ಶಿವಮೊಗ್ಗ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ, ಅಂತಹ ಯಾವುದೇ ಅಧಿಕಾರಿ ಅಲ್ಲಿಲ್ಲ ಮತ್ತು ಅವರ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ ಎಂಬ ಸತ್ಯ ಹೊರಬಿದ್ದಿದೆ.
ಈ ಹಿನ್ನೆಲೆ ಶಿವಮೊಗ್ಗದ ಸಿಇಎನ್ ಾಣೆಯಲ್ಲಿ ಪ್ರಕರಣ ದಾಖಲಾಗಿದೆ.

