ಕುವೆಂಪು ವಿ.ವಿ ಹಗರಣ ; ತನಿಖೆಗೆ ಸಮಿತಿ

ಬೆಂಗಳೂರು

ಬೆಂಗಳೂರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್‌ಕ್ಲಾಸ್ ಗಳ ನಿರ್ಮಾಣಕ್ಕಾಗಿ ನೀಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಹಣ ದುರುಪಯೋಗ ಕುರಿತು ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗುರುರಾಜನ್‌ ಅವರನ್ನು ನೇಮಿಸಲಾಗಿದೆ.

ಹಣ ದುರುಪಯೋಗ ಕುರಿತು ನೇಮಕವಾದ ಏಕಸದಸ್ಯ ತನಿಖಾ ಸಮಿತಿಯು ಸೂಕ್ತ ತನಿಖೆ ನಡೆಸಿ, ಒಂದು ತಿಂಗಳ ಒಳಗೆ ವರದಿ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ ಹೊರಡಿಸಿದ್ದಾರೆ.

ಸಮಿತಿಗೆ ನೆರವು ನೀಡುವ ಜವಾಬ್ದಾರಿಯನ್ನು ಲೋಕಭವನದ ವಕೀಲ ಅಭಿಷೇಕ್ ಕುಮಾರ್ ಅವರಿಗೆವಹಿಸಲಾಗಿದೆ.

ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್‌ಕ್ಲಾಸ್ ಸೌಲಭ್ಯ ಒದಗಿಸಲು 2022ನೇ ಜನವರಿಯಲ್ಲಿ ರಾಜ್ಯ ಸರ್ಕಾರ 75 ಕೋಟಿ ಅನುದಾನ ಒದಗಿಸಿತ್ತು. ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ‘ಸ್ಮಾರ್ಟ್‌ಕ್ಲಾಸ್‌’ಗಳನ್ನು ಸಿದ್ಧಪಡಿಸಲಾಗಿತ್ತು.

ಆದರೆ, ಮಾರುಕಟ್ಟೆ ಬೆಲೆಗಿಂತ ಅಧಿಕ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಿ ವಂಚಿಸಲಾಗಿದೆ. ಭೌತಿಕ ಪರಿಶೀಲನೆ ನಡೆಸದೆ, ನಗದು ರಸೀದಿ ಪಡೆಯದೆ ಗುತ್ತಿಗೆ ಕಂಪನಿಯೊಂದಕ್ಕೆ 12.99 ಕೋಟಿ ಪಾವತಿಸಲಾಗಿದೆ ಎಂದು ಕೆಲವರು ಉನ್ನತ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ಈ ಕುರಿತು ಈಗಾಗಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶ ಎಚ್.ಬಿ.ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸ ಲಾಗಿತ್ತು. ಸಮಿತಿಯು ಅಂದಿನ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸೇರಿದಂತೆ ಹಲವು ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ವರದಿ ನೀಡಿತ್ತು.

ರಾಜ್ಯ ಸರ್ಕಾರ ಸಲ್ಲಿಸಿದ ಈ ವರದಿಯ ಆಧಾರದಲ್ಲಿ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಲು ಹೊಸ ಸಮಿತಿ ರಚಿಸಲಾಗಿದೆ.

Author