ಶಿವಮೊಗ್ಗ,ಮಕ್ಕಳ ಸುರಕ್ಷತೆ ಕೇವಲ ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿಯಲ್ಲ, ಅವರನ್ನು ಪ್ರತಿದಿನ ಶಾಲೆಗೆ ಕರೆತರುವ ಮತ್ತು ಸುರಕ್ಷಿತವಾಗಿ ಮನೆಗೆ ತಲುಪಿಸುವ ಸಾರಿಗೆ ವಿಭಾಗದ ಚಾಲಕರು ಹಾಗೂ ನಿರ್ವಾಹಕರ ಮೇಲೆಯೂ ಮಹತ್ತರ ಹೊಣೆಗಾರಿಕೆಯಿದೆ. ಕರ್ತವ್ಯದ ಪರಿಧಿಯನ್ನು ಮೀರಿಯೂ ಮಕ್ಕಳ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ಮತ್ತು ಮಾನವೀಯ ಸಂವೇದನೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ಹೇಳಿದರು.
ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ನಗರ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಶುಕ್ರವಾರ ಶಾಲಾ ಸಿಬ್ಬಂದಿ ಮತ್ತು ಸಾರಿಗೆ ವಿಭಾಗದ ಚಾಲಕರಿಗಾಗಿ ಆಯೋಜಿಸಿದ್ದ ‘ಚಾಲನೆ ಮೀರಿದ ಕರ್ತವ್ಯ: ಶಾಲಾ-ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸುರಕ್ಷತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳು ಸಮಾಜದ ಭವಿಷ್ಯದ ಅಮೂಲ್ಯ ರತ್ನಗಳು. ಅವರ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುವುದು ಪ್ರತಿಯೊಬ್ಬ ಚಾಲಕ ಮತ್ತು ನಿರ್ವಾಹಕರ ನೈತಿಕ ಹೊಣೆಗಾರಿಕೆಯಾಗಿದೆ. ವಾಹನ ಚಾಲನೆಯ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಮಕ್ಕಳ ಹತ್ತುವಿಕೆ ಮತ್ತು ಇಳಿಯುವಿಕೆ, ವಾಹನದೊಳಗಿನ ಶಿಸ್ತು ಹಾಗೂ ಅವರ ವೈಯಕ್ತಿಕ ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಪೋಕ್ಸೊ ಕಾಯ್ದೆಯ ಕುರಿತು ಸಾರಿಗೆ ಸಿಬ್ಬಂದಿ ಸಮರ್ಪಕ ಅರಿವು ಹೊಂದಿರಬೇಕು. ಮಕ್ಕಳ ವರ್ತನೆ, ಮನಸ್ಥಿತಿ ಅಥವಾ ದೈಹಿಕ ಸ್ಥಿತಿಯಲ್ಲಿ ಅಸಹಜ ಬದಲಾವಣೆಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ತಕ್ಷಣ ಪೋಷಕರಿಗೆ ಹಾಗೂ ಸಂಸ್ಥೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಮಕ್ಕಳೊಂದಿಗೆ ಗೌರವಯುತವಾಗಿ ಮತ್ತು ಸಂವೇದನಾಶೀಲವಾಗಿ ವರ್ತಿಸುವ ಮೂಲಕ ಅವರಲ್ಲಿ ಸುರಕ್ಷತೆಯ ಭಾವನೆ ಮೂಡಿಸಬೇಕು ಎಂದು ತಿಳಿಸಿದರು.
