ಸಾಗರ,ಕರ್ನಾಟಕ ರಾಜ್ಯ ಕಂಡಿರುವ ಹಿರಿಯ ರಾಜಕೀಯ ಮುತ್ಸದಿ,ಜನಪರ ಕಾಳಜಿಯ ಅಪರೂಪದ ರಾಜಕೀಯ ಶಕ್ತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರನ್ನು ಅವಮಾನಿಸಿರುವ ಕಲ್ಲೂರು ಮೇಘರಾಜ್ ವರ್ತನೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಅಶೋಕ ಬರದವಳ್ಳಿ ಎಚ್ಚರಿಕೆ ನೀಡಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರ ಸುದೀರ್ಘ ರಾಜಕೀಯ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅವರಿಗೆ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಆದರೆ ಕಲ್ಲೂರು ಮೇಘರಾಜ್ ಅಪಸ್ವರ ಎತ್ತಿರುವುದು ಹಾಸ್ಯಾಸ್ಪದ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಅವಮಾನಿಸಿರುವ ಕಲ್ಲೂರು ಮೇಘರಾಜ್ ಇನ್ನೂ ಎರಡು ದಿನಗಳಲ್ಲಿ ಬಹಿರಂಗ ಕ್ಷಮೆ ಕೇಳದೆ ಹೋದಲ್ಲಿ ಅವರ ಮನೆ ಎದುರು ಮತ್ತು ಅವರು ಸಂಚರಿಸುವ ರಸ್ತೆಗಳಲ್ಲಿಯೇ ಅವರ ಕಾರು ಅಡ್ಡಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಒಂದು ಕಾಲದಲ್ಲಿ ಕಾಗೋಡು ತಿಮ್ಮಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕಲ್ಲೂರು ಮೇಘರಾಜ್ ಯಾರು ಎನ್ನುವುದು ನಮಗೆ ಗೊತ್ತಿರಲಿಲ್ಲ. ಇತ್ತೀಚಿನ ಅವರ ಹೇಳಿಕೆಗಳ ಹಿನ್ನೆಲೆಯಲ್ಲಿ ಕಲ್ಲೂರು ಮೇಘರಾಜ್ ಯಾರು ಎಂದು ಹುಡುಕಾಟ ನಡೆಸಿದಾಗ ಅವರೊಬ್ಬ ಸಾಮಾಜಿಕ ಕಾರ್ಯಕರ್ತ ಎನ್ನುವುದು ಗೊತ್ತಾಗಿದೆ ಮತ್ತು ಕಾಗೋಡು ತಿಮ್ಮಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾಗ ಹೇಗೆ ನಯವಿನಯದಿಂದ ನಡೆದುಕೊಂಡಿದ್ದರು ಎನ್ನುವುದನ್ನು ನೆನಪಿಸಬೇಕು ಎಂದರು.
ಕಾಗೋಡು ತಿಮ್ಮಪ್ಪ ಅವರಿಂದ ಬದುಕಿನಲ್ಲಿ ಉಪಕಾರ ಪಡೆದುಕೊಂಡವರು ಇಂದು ಬಾಯಿಚಪಲಕ್ಕೆ ಅವಿವೇಕಿಯಂತೆ ಹಿರಿಯ ರಾಜಕೀಯ ಜನಪ್ರಿಯ ನಾಯಕರನ್ನು ಟೀಕಿಸಿರುವುದು ಕಾಗೋಡುತಿಮ್ಮಪ್ಪನವರ ಅಭಿಮಾನಿಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಕಾಗೋಡು ತಿಮ್ಮಪ್ಪ ಅವರು ಯಾವುದೇ ಅರ್ಜಿ ಹಾಕಿ ಪ್ರಶಸ್ತಿ ಪಡೆದಿಲ್ಲ. ಸರ್ಕಾರವೇ ಗುರುತಿಸಿ ಪ್ರಶಸ್ತಿ ಉನ್ನತ ನೀಡಿದೆ. ಅದನ್ನು ಮಾನಮರ್ಯಾದೆ ಇದ್ದರೇ ವಾಪಾಸ್ ಕೊಡಿ ಎಂದು ಅತ್ಯಂತ ಹೇಯ ಹಾಗೂ ಅವಮಾನಕರ ರೀತಿಯಲ್ಲಿ ಹೇಳಿರುವುದು ಖಂಡನೀಯ ಎಂದರು.
ಸಚಿವ ಮಧು ಬಂಗಾರಪ್ಪ ಅವರನ್ನು ಕನಿಷ್ಠ ಗೌರವದಿಂದ ಸಂಭೋದಿಸುವ ಬದಲಿಗೆ ತಲೆಕೂದಲುಗಳ ಕುರಿತು ಮಾತನಾಡಿ ಪ್ರಾಣಿಯೊಂದಕ್ಕೆ ಹೋಲಿಕೆ ಮಾಡಿರುವ ಕಲ್ಲೂರು ಮೇಘರಾಜ್ ಹೇಳಿಕೆ ತಕ್ಷಣ ಹಿಂದಕ್ಕೆ ಪಡೆಯಬೇಕು. ಶಿವಮೊಗ್ಗದಲ್ಲಿ ಪ್ರೆಸ್ಕ್ಲಬ್ನಲ್ಲಿ ಕೋಟು ಹಾಕಿಕೊಂಡು ಹೇಳಿಕೆ ನೀಡುವಾಗ ಹೇಗಿದ್ದರೋ ಅದೆ ಸ್ಟೈಲ್ನಲ್ಲಿಯೇ ಪತ್ರಿಕಾಗೋಷ್ಠಿ ಮೂಲಕವೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
